

ಹಾವೇರಿ: ದೇಶದ ಪ್ರತಿ ಪ್ರಜೆಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಸಂವಿಧಾನ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರ್ಥೈಸಿಕೊಂಡು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಸಂವಿಧಾನ ಪೀಠಿಕೆಯನ್ನು ಓದುತ್ತೇವೆ, ಆದರೆ, ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸಂವಿಧಾನದ ಮೂಲ ಆಶಯಗಳನ್ನು ಸಂವಿಧಾನದ ಪೀಠಿಕೆಯ ಒಂದೇ ಪುಟದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದರು.
ಭಾರತವು ಒಂದು ಸಾರ್ವಭೌಮ, ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ನಮ್ಮ ದೇಶ ವಿಶ್ವ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿದ್ದರೂ ಸಹ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರಿಂದ ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬಹುದು. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ನಮ್ಮ ದೇಶದಲ್ಲಿ ವಿವಿಧ ಭಾಷೆ, ವಿವಿಧ ಸಂಸ್ಕೃತಿಗಳಿದ್ದರೂ ಸಹ ಇಂದು ಭಾರತ ಅಖಂಡತೆಯಿಂದ ಇರಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸೋಣ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಆನವಟ್ಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಹುರಳಿ ಮಾತನಾಡಿ, ದೇಶದ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯಲ್ಲಿ ಜನ ಸಾಮಾನ್ಯನೂ ಆಡಳಿತ ನಡೆಸುವ ಅವಕಾಶ ಹೊಂದಿದ್ದಾನೆ. ಆರಂಭದಲ್ಲಿ ಪ್ರಜಾಪ್ರಭುತ್ವ ಆಡಳಿತ ಹೇಗೆ ನಡೆಸುತ್ತಾರೆ ಎಂದು ಜಗತ್ತಿನ ಕೆಲ ರಾಷ್ಟ್ರಗಳು ವ್ಯಂಗ್ಯವಾಡುತ್ತಿದ್ದವು. ಆದರೆ, ಭಾರತದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶೇ.46ರಷ್ಟು ಮತದಾನವಾಗಿತ್ತು, 76ಕ್ಕೂ ಅಧಿಕ ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಪ್ರಜಾಪ್ರಭುತ್ವ ಮಾರ್ಗದಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಸುಗಮವಾಗಿ ಆಡಳಿತ ನಡೆಸುವುದರ ಮೂಲಕ ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ನಡೆದುಕೊಂಡು ಬಂದಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಪಂ ಯೋಜನಾಧಿಕಾರಿ ಎಸ್.ಕೊರವರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ರಮೇಶ ಆನವಟ್ಟಿ, ಹೊನ್ನಪ್ಪ ತಗಡಿನಮನಿ, ಬಸಣ್ಣ ಹೆಡಿಗ್ಗೊಂಡ, ಮುತ್ತುರಾಜ ಮಾದರ, ಅಕ್ಷತಾ ಕೆ.ಸಿ., ಇತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಸ್ವಾಗತಿಸಿದರು. ವಾಸು ಲಮಾಣಿ ವಂದಿಸಿದರು.
ಸಿಎಂ ಕಾರ್ಯಕ್ರಮ ನೇರ ಪ್ರಸಾರ
ಇದಕ್ಕೂ ಮುನ್ನ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರದರ್ಶಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ಪೀಠಿಕೆ ಬೋಧಿಸಿದರು. ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮುಖ್ಯಮಂತ್ರಿಯವರೊಂದಿಗೆ ಸಂವಿಧಾನ ಪೀಠಿಕೆಯನ್ನು ವಾಚಿಸಲಾಯಿತು.