ಮಾನವ ಕಳ್ಳ ಸಾಗಣೆ ತಡೆ ಜಾಗೃತಿ ಕಾರ್ಯಕ್ರಮ

2 HVR 5
Published on

ಹಾವೇರಿ: ನಗರದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಮಾನವ ಕಳ್ಳ ಸಾಗಣೆ ತಡೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಜರುಗಿತು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯ ಎಂ.ಎಸ್.ಜಾಲಗಾರ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಪಾಟೀಲ, ನಿಲಯ ಮೇಲ್ವಿಚಾರಕಿ ನಂದಾ ಹೂಗಾರ, ಇತರರಿದ್ದರು.
ಪ್ರತಿಜ್ಞಾವಿಧಿ ಸ್ವೀಕಾರ :
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಪುಟ್ಟರಾಜು, ‘ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ವಿಮುಕ್ತಗೊಳಿಸಲು ಹಾಗೂ ಸಾಗಾಣಿಕೆಗೆ ಒಳಪಟ್ಟವರಿಗೆ ಸೂಕ್ತ ನ್ಯಾಯ ಒದಗಿಸಲು ನನ್ನ ಸೇವೆಯನ್ನು ಮುಡುಪಾಗಿಸುತ್ತೇನೆ. ಸಂವಿಧಾನದಲ್ಲಿ ನೀಡಿರುವ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net