ಹಾವೇರಿ: ರಾಜ್ಯ ಸರ್ಕಾರದ ಯೋಜನೆಯಡಿ ಪ್ರಸಕ್ತ ಸಾಲಿಗೆ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಸೌಲಭ್ಯಕ್ಕೆ ದೈಹಿಕ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಭಾರತ ಪ್ರಜೆಯಾಗಿದ್ದು, ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಾಸವಾಗಿರಬೇಕು ಹಾಗೂ 15 ವರ್ಷ ಮೇಲ್ಪಟ್ಟವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ರೋ. ಒಳಗಿರಬೇಕು. ದೈಹಿಕ ವಿಕಲಚೇತನರು ಶೇ.75 ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರವಾಹನವನ್ನು ಚಾಲನೆ ಮಾಡಲು ಸಾಮರ್ಥ್ಯ ಹೊಂದಿರದ ಹಾಗೂ ಕನಿಷ್ಠ ಒಂದು ಕೈ, ಒಂದು ಕಣ್ಣು ಸ್ವಾಧೀನದಲ್ಲಿರಬೇಕು ಹಾಗೂ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಚಲಾಯಿಸಲು ಇತರೆ ಎಲ್ಲ ರೀತಿಯಲ್ಲಿ ಸದೃಢವಾಗಿರುವ ವಿಕಲಚೇತನರಾಗಿರಬೇಕು. ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಹಾಗೂ ಆನ್‌ಲೈನ್‌ನಲ್ಲಿ ಪಡೆದ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಈ ಹಿಂದೆ ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರವಾಹನ ಪಡೆದಿರಬಾರದು ಹಾಗೂ ಇತರೆ ಇಲಾಖೆಗಳು ಅಥವಾ ಸಂಘ-ಸಂಸ್ಥೆಗಳಿಂದ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಪಡೆದಿದ್ದಲ್ಲಿ ಅಂತಹವರು ಅರ್ಹರಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ಜ.18ರೊಳಗಾಗಿ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯುಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶೂ ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.