ವಕ್ಫ್ ಕಾಯ್ದೆ ವಿರುದ್ಧ ಬಿಜೆಪಿ ರಣಕಹಳೆ; ಹಾವೇರಿಯಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ; 40ಕ್ಕೂ ಅಧಿಕ ಕಾರ್ಯಕರ್ತರ ಬಂಧನ, ಬಿಡುಗಡೆ

21 HVR 3 B
Published on

ಹಾವೇರಿ: ವಕ್ಫ್ ಹೆಸರಲ್ಲಿ ರೈತರು, ಅಮಾಯಕರ ಆಸ್ತಿ ಕಬಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಕ್ಫ್ ಕಾಯ್ದೆ ವಿರುದ್ಧ ರಣಕಹಳೆ ಮೊಳಗಿಸಿದ ಬಿಜೆಪಿಯ 40ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಸಿದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ಬಂದ್ ಮಾಡಿದರು. ರಸ್ತೆ ಸಂಚಾರ ತಡೆಯದಂತೆ ಪೊಲೀಸರು ಮನವೊಲಿಸಲು ಮುಂದಾದರು. ಆದರೆ, ಇದಕ್ಕೆ ಬಿಜೆಪಿ ಕಾರ್ಯಕರ್ತರು ಒಪ್ಪಲಿಲ್ಲ. ಹಾಗಾಗಿ, ಪೊಲೀಸರು ಪ್ರಮುಖ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಮುಸ್ಲಿಮರ ತುಷ್ಟೀಕರಣ ಮಾಡಲೆಂದು ರಾಜ್ಯ ಸರ್ಕಾರ ವಕ್ಫ್ ಹೆಸರಲ್ಲಿ ರೈತರ, ಅಮಾಯಕರ ಜಮೀನು ನುಂಗುತ್ತಿದೆ. ಈ ರೀತಿ ಅತಿರೇಕದ ವರ್ತನೆ ಯಾಕೆ ಮಾಡುತ್ತೀರಿ ? ನಮಗೆ ಹಿಂದುಗಳ ಓಟು ಬೇಡ ಎಂದು ನೇರವಾಗಿ ಹೇಳಿಬಿಡಿ ಎಂದು ಹೇಳಿದರು.

ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ. 50 ಕೋಟಿ ರೂ. ಆಫರ್ ಕೊಡುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಯಾಕೆ ಮಾಡುತ್ತೀರಿ. ಸರ್ಕಾರ ರಚಿಸಲು 90 ಶಾಸಕರು ಬೇಕು. ಇದೆಲ್ಲ ಅಸಾಧ್ಯವಾದ ಮಾತು. ಸರ್ಕಾರಿ ಅಧಿಕಾರಿಗಳ ಕಾರುಗಳಿಗೆ, ಸರ್ಕಾರಿ ಬಸ್‌ಗಳಿಗೆ ಪೆಟ್ರೋಲ್, ಡೀಸೆಲ್ ಹಾಕಲು ಸರ್ಕಾರದ ಬಳಿ ಹಣ ಇಲ್ಲ. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಇದನ್ನು ಮರೆಮಾಚಲು ಇಲ್ಲಸಲ್ಲದ ನಾಟಕ ಆಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಇದು ನಿದ್ರಾಮಯ್ಯ ಸರ್ಕಾರ, ಪೀರ್‌ಸಾಬನ ಸರ್ಕಾರ. ರಾಜ್ಯಾದ್ಯಂತ ಅಭಿವೃದ್ಧಿ ಶೂನ್ಯವಾಗಿದೆ. ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಹುನ್ನಾರ ನಡೆಸಿದೆ. ರಾಜ್ಯ ಸರ್ಕಾರಕ್ಕೆ ಐದು ಕೆಜಿ ಅಕ್ಕಿ ಕೊಡಲೂ ಆಗಲಿಲ್ಲ. ಹಗರಣಗಳ ಸರಮಾಲೆ ಸುತ್ತಕೊಂಡಿದೆ. ರಾಜ್ಯಾದ್ಯಂತ ಜನಾಕ್ರೋಶ ಸೃಷ್ಟಿಯಾಗಿದೆ. ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತೀಯಲ್ಲ ಸಿದ್ದರಾಮಯ್ಯ ನಿನಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಭೋಜರಾಜ ಕರೂದಿ ಮಾತನಾಡಿ, ಮಠ, ಮಂದಿರ, ಮೆಜೆಸ್ಟಿಕ್, ವಿಧಾನಸೌಧವೂ ವಕ್ಫ್ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ನಿಮ್ಮ, ನಮ್ಮ ಆಸ್ತಿಯನ್ನೂ ವಕ್ಫ್‌ಗೆ ಸೇರಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮೇಲೆ ಒಂದರ ಮೇಲೊಂದು ಹಗರಣ ಬೆಳಕಿಗೆ ಬರುತ್ತಿದೆ. ಒಬ್ಬ ಮುಸ್ಲಿಂ ಸಚಿವ ಜಮೀರ್ ಅಹ್ಮದ್ ಇದ್ದು ಇಷ್ಟು ಸಮಸ್ಯೆ ಆಗುತ್ತಿದೆ. ಇಂತಹ ನಾಲ್ಕೈದು ಸಚಿವರಾದರೆ ರಾಜ್ಯವನ್ನೇ ಮಾರುತ್ತಾರೆ ಎಂದರು.

ನಮ್ಮ ಕನಕದಾಸರ ನಾಡು ಕಾಗಿನೆಲೆಯಲ್ಲೂ ವಕ್ಫ್ ಕಾಟ ಶುರುವಾಗಿದೆ. ಈ ಸಿದ್ದರಾಮಯ್ಯ ಯಾವ ಜಾತಿಯಲ್ಲಿ ಹುಟ್ಟಿದ್ದಾರೋ ಎಂಬ ಅನುಮಾನ ಮೂಡುತ್ತಿದೆ. ಜಮೀರ್ ಒಬ್ಬ ಕ್ರಿಮಿನಲ್. ಅದು ಹೇಗೆ ಸಾವಿರಾರು ಕೋಟಿ ಮಾಡಿದ್ದಾನೋ ಗೊತ್ತಿಲ್ಲ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ವಕ್ಫ್ ಮಂಡಳಿ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ಕೋಟ್:

ನಿಮ್ಮನ್ನು ಯಾರೂ ಆಪರೇಷನ್ ಮಾಡುವುದು ಬೇಡ. ನಿಮ್ಮವರೇ ನಿಮಗೆ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಆಪರೇಷನ್ ಮಾಡಲು ಡಿಕೆಶಿ, ಡಿಕೆಶಿ ಆಪರೇಷನ್ ಮಾಡಲು ಪರಮೇಶ್ವರ ಕಾದಿದ್ದಾರೆ. ಸಿದ್ದರಾಮಯ್ಯ ಡಿಸೆಂಬರ್ ಅಥವಾ ಜನವರಿಯಲ್ಲಿ ಯಾವಾಗ ಮಾಜಿ ಆಗುತ್ತಾರೋ ಗೊತ್ತಿಲ್ಲ. ನಿಮ್ಮನ್ನು ನಾವ್ಯಾರೂ ಮುಟ್ಟಲ್ಲ. ನಿಮ್ಮವರೇ ಮುಟ್ಟುತ್ತಾರೆ.

ಬಿ.ಸಿ.ಪಾಟೀಲ, ಮಾಜಿ ಸಚಿವ

ಕೋಟ್:

ಓಟಿನ ಸಲುವಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಬಿಜೆಪಿ ಇರುವವರೆಗೂ, ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲರು, ಪ್ರಲ್ಹಾದ ಜೋಶಿ ಇರುವವರೆಗೂ ರೈತರ, ಅಮಾಯಕರ ಒಂದಿಂಚು ಆಸ್ತಿಯನ್ನು ಯಾರೂ ತೆಗೆದುಕೊಳ್ಳಲು ಬಿಡಲ್ಲ.

ಭರತ ಬೊಮ್ಮಾಯಿ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net