

ಹಾವೇರಿ: ಪ್ರಜಾಪ್ರಭುತ್ವದ ಹಬ್ಬವಾಗಿ ಚುನಾವಣೆಯನ್ನು ಆಚರಿಸಲಾಗುತ್ತಿದ್ದು, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ಮುಂದಾಗಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಪರಶುರಾಮ ರೋಗಣ್ಣನವರ ತಿಳಿಸಿದರು.
ಕೂರಗುಂದ ಗ್ರಾಮ ಪಂಚಾಯಿತಿ ವತಿಯಿಂದ ಕೂರಗುಂದ ಗ್ರಾಮದಲ್ಲಿ ದ್ಯಾಮವ್ವ ದೇವಿ ಜಾತ್ರೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 5 ವರ್ಷಕ್ಕೊಮ್ಮೆ ಎದುರಾಗುವ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಜತೆಗೆ ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದ್ದು, ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಗ್ರಾಮಸ್ಥರಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಶಿಕ್ಷಣ ಸಂಯೋಜಕ ಗಿರೀಶ ಬೆನ್ನೂರ, ಇಂಜಿನಿಯರ್ ಕೃಷ್ಣ ಸುಬ್ಬರಗಟ್ಟಿ, ಪಂಚಾಯಿತಿ ಸಿಬ್ಬಂದಿ ವರ್ಗ, ಸಾರ್ವಜನಿಕರು ಪಾಲ್ಗೊಂಡಿದ್ದರು.