

ಹಾವೇರಿ: ಉಪ ರಾಷ್ಟ್ರಪತಿ ಜಗದೀಪ ಧನಕರ್ ಫೆ.7ರಂದು ಜಿಲ್ಲೆಯ ರಾಣೆಬೆನ್ನೂರ ನಗರದಲ್ಲಿ ನಡೆಯಲಿರುವ ಕರ್ನಾಟಕ ವೈಭವ ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕು ಹಾಗೂ ಯಾವುದೇ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉಪ ರಾಷ್ಟ್ರಪತಿಯವರ ಜಿಲ್ಲಾ ಪ್ರವಾಸ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉಪ ರಾಷ್ಟ್ರಪತಿಯವರು ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ರಾಣೆಬೆನ್ನೂರ ನಗರದಲ್ಲಿ ಉತ್ತಮ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು. ರಸ್ತೆಗಳು ಸುಸ್ಥಿತಿಯಲ್ಲಿ ಇರಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ತುರ್ತು ಆರೋಗ್ಯ ಸೇವೆ ಒದಗಿಸಲು ಕಾರ್ಯಕ್ರಮದ ವೇದಿಕೆ ಬಳಿ ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ವಿಶೇಷ ಪರಿಣಿತ ತಜ್ಞ ವೈದ್ಯರು ಇರುವ ಉತ್ತಮ ಆಸ್ಪತ್ರೆ ಗುರುತಿಸಬೇಕು. ಸ್ಥಳದಲ್ಲಿ ಸುಸಜ್ಜಿತ ಆಂಬುಲೆನ್ಸ್, ವೈದ್ಯರು ಸೇರಿ ಅಗತ್ಯ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದ ವೇದಿಕೆ ನಿರ್ವಹಣೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಗ್ರೀನ್ ರೂಂ ಸ್ಥಾಪನೆ, ಇಂಟರ್‌ನೆಟ್ ವ್ಯವಸ್ಥೆ, ವಿದ್ಯುತ್ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ರಾಣೆಬೆನ್ನೂರ ತಹಸೀಲ್ದಾರ್, ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪೊಲೀಸ್ ಬಂದೋಬಸ್ತ್
ಉಪ ರಾಷ್ಟ್ರಪತಿಗಳ ಆಗಮನ, ವೇದಿಕೆ ಕಾರ್ಯಕ್ರಮ ಹಾಗೂ ಕಾರ್ಯಕ್ರಮದ ನಂತರ ತೆರಳುವವರೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಡಿಸಿ ನಿರ್ದೇಶಿಸಿದರು.