ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವಕರ್ಮಿಗಳ ಕೊಡುಗೆ ಅಪಾರ; ಡಿಸಿ ಡಾ.ವಿಜಯಮಹಾಂತೇಶ ಹೇಳಿಕೆ

20 HVR 5
Published on

ಹಾವೇರಿ: ದೇಶದ ಆರ್ಥಿಕ ಬೆಳವಣಿಗೆಗೆ ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳು ಹೇಗೆ ಸಹಕಾರಿಯಾಗಿದೆಯೋ ಅದೇ ರೀತಿ ವಿಶ್ವಕರ್ಮಿಗಳು ಕೂಡ ದೇಶದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಗಳ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 17, 2023ರಂದು ದೇಶಾದ್ಯಂತ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿರುವ 18 ಮೂಲ ಕಸಬುದಾರರು ಕೇವಲ ಒಂದೇ ಒಂದು ವೃತ್ತಿಗೆ ಸೀಮಿತರಾಗದೆ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಅಭಿವೃದ್ಧಿ ಹಾಗೂ ಸ್ವಾವಲಂಬನೆ ಹೊಂದುವುದಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 25 ವಿಶ್ವಕರ್ಮ ತರಬೇತಿ ಕೇಂದ್ರಗಳಿದ್ದು, ಅದರಲ್ಲಿ 14 ತರಬೇತಿ ಕೇಂದ್ರಗಳು ಸಕ್ರಿಯವಾಗಿವೆ. ಈವರೆಗೂ 84,885 ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 2,846 ಜನರು ತರಬೇತಿ ಪಡೆದುಕೊಂಡಿದ್ದಾರೆ. ತರಬೇತಿ ಪಡೆದವರಿಗೆ ಗುರುತಿನ ಚೀಟಿ, ತರಬೇತಿ ಪ್ರಮಾಣ ಪತ್ರ, ಆರ್ಥಿಕ ಬೆಂಬಲ, ಮಾರುಕಟ್ಟೆ ಸೌಲಭ್ಯ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.
ಈ ಯೋಜನೆಯಡಿಯಲ್ಲಿ ತರಬೇತಿ ಪಡೆದುಕೊಂಡವರಿಗೆ ಬ್ಯಾಂಕುಗಳಿಂದ ಆರ್ಥಿಕ ಬೆಂಬಲ ಜೊತೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ತರಬೇತಿ ಪಡೆದುಕೊಂಡ ಕಾರ್ಮಿಕರಿಗೆ ಮೊದಲನೇ ಹಂತದಲ್ಲಿ 1 ಲಕ್ಷ ರೂಲಗೆ ಶೇ.5ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಈ ಸಾಲ ಮರುಪಾವತಿ ನಂತರ ಮತ್ತೆ 2 ಲಕ್ಷ ರೂ. ಶೇ.5ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಗುರಿ ಹೊಂದಿದೆ ಎಂದರು.
ಸಮಾರಂಭದಲ್ಲಿ ತರಬೇತಿ ಪಡೆದುಕೊಂಡ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಯವರು ಪ್ರಮಾಣ ಪತ್ರ ವಿತರಿಸಿದರು. ಪಿಎಂ ವಿಶ್ವಕರ್ಮ ಸಂಯೋಜನಾಧಿಕಾರಿ ರೋಹಿಣಿ ಪಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಸ್.ಎಚ್.ತಿಮ್ಮೇಶಕುಮಾರ, ಅಂಚೆ ಕಚೇರಿ ಶಾಖಾಧಿಕಾರಿ ಶಾಮಪ್ರಸಾದ, ಎಸ್‌ಬಿಐ ಶಾಖಾಧಿಕಾರಿ ಧನಂಜಯ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net