

ಹಾವೇರಿ: ಕನ್ನಡ ಎಲ್ಲರ ಉಸಿರಾಗಬೇಕಾದರೆ ಉಸಿರುಗಟ್ಟಿರುವ ಕನ್ನಡ ಶಾಲೆಗಳಿಗೆ ಆಮ್ಲಜನಕ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ಆಗಬೇಕು. ಇದರಿಂದ ಕನ್ನಡ ಭಾಷೆಯ ಉದ್ದಾರ ಆಗುತ್ತದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಇಲ್ಲಿನ ವಿನಾಯಕನಗರದ ಉದ್ಯಾನವನದ ಬೆಳದಿಂಗಳ ಬಯಲಿನಲ್ಲಿ ನಾಗರಿಕರ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಭಾರಿಸು ಕನ್ನಡ ಡಿಂಡಿಂವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕನ್ನಡ ಬರ‌್ರಿ ನಮ್ಮ ಸಂಗಡ ಎಂಬ ಚಂಪಾ ಅವರ ಘೋಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರ‌್ರಿ ನಮ್ಮ ಸಂಗಡ ಎಂದರೆ ಎಷ್ಟು ಕೊಡುತ್ತೀರಿ ಮುಂಗಡ? ಎನ್ನುವವರೂ ಇದ್ದಾರೆ. ಕನ್ನಡದ ಕೆಲಸ ಕೂಲಿಯ ಕೆಲಸವಲ್ಲ. ಕರುಳಿನ ಕೆಲಸ. ಅದು ದಲ್ಲಾಳಿಯ ಕೆಲಸವಲ್ಲ, ದೀಕ್ಷೆಯ ಕೆಲಸ. ಕನ್ನಡ ಭಾಷೆ ಉಳಿಯುವುದು ಕಥೆ, ಕಾದಂಬರಿಗಳಿಂದಲ್ಲ, ಅದು ಉಳಿಯುವುದು ಜನರ ಬಳಕೆಯಿಂದ. ನಮ್ಮ ಕನ್ನಡದಲ್ಲಿ ಇರುವಷ್ಟು ವೈವಿದ್ಯತೆ, ವೈಶಿಷ್ಟ್ಯತೆ ಬಹುಶಃ ಬೇರೆ ಯಾವ ಭಾಷೆಯಲ್ಲೂ ಇಲ್ಲ. ಕನ್ನಡ ನುಡಿಗೆ ಘನತೆ, ಗಾಂಭೀರ್ಯತೆ, ಸ್ವಂತಿಕೆ, ಸ್ವಾರಸ್ಯವಿದೆ. ಇದಕ್ಕೆ ಭಂಗ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ದೊರೆಯಲಿ ಎಂದಾಕ್ಷಣ ಬೇರೆಯವರಿಗೆ ಸ್ಥಾನವೇನಿಲ್ಲ ಎಂದಲ್ಲ. ನಮ್ಮಲ್ಲಿಗೆ ಬೇರೆಯವರೂ ಬರಲಿ, ಅತಿಥಿಯಾಗಿ ಬರಲಿ, ಯಜಮಾನರಾಗಿ ಅಲ್ಲ. ಕನ್ನಡ ಉಳಿದರೆ ಕರ್ನಾಟಕ ಉಳಿಯುತ್ತದೆ. ಇಲ್ಲದಿದ್ದರೆ ಕರ್ನಾಟಕದ ಜನ ಕನ್ನಡ ನೆಲದಲ್ಲೇ ಜೀತದಾಳುಗಳಾಗಿ ಪರಿಭಾಷಿಕರ ಸೇವಕರಾಗಿ ಎರಡನೇ ದರ್ಜೆಯ ಪ್ರಜೆಗಳಾಗಿ ಬಾಳುವ ಸ್ಥಿತಿ ಉಂಟಾಗುತ್ತದೆ. ಕನ್ನಡಕ್ಕೆ ಧಕ್ಕೆಯಾಗುವ ವಿಚಾರಗಳು ಎದುರಾದರೆ ಗೋಕಾಕ ಮಾದರಿ ಚಳುವಳಿ ಅನಿವಾರ್ಯವಾಗುವುದು ಎಂದು ತಿಳಿಸಿದರು.
ಹಿರಿಯರಾದ ಬಸವಂತಪ್ಪ ಭರಮಗೌಡ್ರ ಮಾತನಾಡಿ, ಕನ್ನಡ ಭಾಷೆಗೆ ಪ್ರಾಚೀನತೆ ಇದೆ. ಎಂಟು ಜನ ದಿಗ್ಗಜರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆ ಮತ್ತು ಅಭಿಮಾನವಿದೆ ಎಂದರು.
ವೇದಿಕೆಯ ಅಧ್ಯಕ್ಷ ನಿಜಲಿಂಗಪ್ಪ ಕಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಅವರ ಅನುಭವ ವಿಚಾರಗಳನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಬೇಕಾಗಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಮ್ಮೆಲ್ಲರದ್ದಾಗಬೇಕು ಎಂದರು.
ಶಿವಾನಂದ ಕಪ್ಪರದ, ಭರಮಗೌಡ್ರ ಹಾಗೂ ಪುಟಾಣಿಗಳಾದ ಧೃತಿ, ಆನ್ವಿತಾ, ಅಕ್ಷತಾ ಕನ್ನಡ ಭಾವಗೀತೆಗಳನ್ನು ಹಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್.ಎ.ಸಾಣೆ, ಎಸ್.ಬಿ.ಗಂಜಿಗಟ್ಟಿ, ಖಜಾಂಚಿ ಬಸವರಾಜ ಬೆಲ್ಲದ ಇದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಶಿವಳ್ಳಿ, ಎಸ್.ಎಂ.ಬಡಿಗೇರ, ಬಿ.ಎಂ.ಗುಡ್ಡದ, ಚಿದಂಬರ ಹಜೀಬ, ಪ್ರಕಾಶ ಬಾರಂಗಿ, ಶಿವಾನಂದ ತೆಪ್ಪದ, ಆರ್.ಎಫ್.ಅಜ್ಜಣ್ಣನವರ, ಜೆ.ಎಸ್.ನಾಗನೂರ, ಎಸ್.ಆರ್.ಕಾರಗಿ, ಮತ್ತಿತರರು ಪಾಲ್ಗೊಂಡಿದ್ದರು.
ಪತ್ರಕರ್ತ ಬಸವರಾಜ ಮರಳಿಹಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಂಚಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಜಗದೀಶ ನಾಗನೂರ ವಂದಿಸಿದರು.