ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ ಸೆ.26, 27ರಂದು; 18 ಆ್ಯಪ್‌ಗಳ ಕೆಲಸದ ಒತ್ತಡ ತಗ್ಗಿಸಲು ವಿಎಗಳ ಆಗ್ರಹ

Published on

ಹಾವೇರಿ: ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆಗಳಾಗುತ್ತಿವೆ. ಇವುಗಳ ನಿವಾರಣೆಗೆ ಆಗ್ರಹಿಸಿ ಸೆ.26, 27ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗ್ರಾಮ ಆಡಳಿತ ಅಧಿಕಾರಿ (ವಿಎ)ಗಳ ಸಂಘದ ಜಿಲ್ಲಾಧ್ಯಕ್ಷ ರುದ್ರೇಶ ಎ.ಸಿ. ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 18ಕ್ಕೂ ಹೆಚ್ಚು ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಕೆಲಸ ಮಾಡಬೇಕಿದೆ. ಆದರೆ, ಇಲಾಖೆ ನಮಗೆ ಮೊಬೈಲ್, ಲ್ಯಾಪ್‌ಟಾಪ್ ಸೇರಿ ಯಾವುದೇ ಉಪಕರಣ ಕೊಟ್ಟಿಲ್ಲ. ಜತೆಗೆ ವಿಎಗಳಿಗೆ ನಿರ್ದಿಷ್ಟ ಕಚೇರಿಯನ್ನೂ ಗುರುತಿಸಿಲ್ಲ. ಪ್ರತಿದಿನ ಟಾರ್ಗೆಟ್, ಸಭೆ, ಎಂಬಿತ್ಯಾದಿ ಒತ್ತಡ ಹೇರಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 50ಕ್ಕೂ ಹೆಚ್ಚು ವಿಎಗಳು ಮೃತಪಟ್ಟಿದ್ದಾರೆ. ಶಿಗ್ಗಾಂವಿಯ ಮಂಜುನಾಥ ಮುಳಗುಂದ ಎಂಬುವರು ಬ್ರೇನ್ ಹ್ಯಾಮರೇಜ್ ಆಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.
ಎಲ್ಲ ಮೊಬೈಲ್ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರ್ ಸೀಡೀಂಗ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಹೀಗೆ ಹತ್ತಾರು ಆ್ಯಪ್‌ಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ರಾಜ್ಯದಲ್ಲಿ 7,971 ವಿಎ ಹುದ್ದೆಗಳಿಗೆ ಮಂಜೂರಾಗಿದ್ದು ಪ್ರಸ್ತುತ 2,900 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 264 ಹುದ್ದೆಗಳಿಗೆ ಮಂಜೂರಾಗಿದ್ದು 211 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಪದೋನ್ನತಿಯ ವಿಚಾರದಲ್ಲೂ ವಂಚಿತರಾಗಿದ್ದೇವೆ. ಕಂದಾಯ ಇಲಾಖೆಯ 3 ವರ್ಷಗಳ ಸೇವೆ ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸುವಂತೆ ಒತ್ತಾಯಿಸಿದರು.
ಸೆ.26ರಂದು ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಕೆಲಸಕ್ಕೆ ಗೈರಾಗಿ ಪ್ರತಿಭಟಿಸಲಾಗುವುದು. ಸೆ.27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಗುವುದು. ಇದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡದಿದ್ದಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ ಮಾತನಾಡಿ, ಈ ಹೋರಾಟಕ್ಕೆ ನಮ್ಮ ಸಂಘದ ಬೆಂಬಲ ಇದೆ ಎಂದು ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎನ್.ಪಾಟೀಲ, ಎಂ.ಎನ್.ಸಂಜೀವಣ್ಣನವರ, ನಾಗರಾಜ ರೆಡ್ಡಿ, ಎಸ್.ಬಿ.ದೇಸಾಯಿ, ಎಸ್.ಎಂ.ಯತ್ನಳ್ಳಿ, ಎಂ.ಎಸ್.ಜಮಾದಾರ, ಎಂ.ಆರ್.ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net