ಎಲ್ಲ ಕಷ್ಟಗಳಿಗೂ ಶಿಕ್ಷಣ ಒಂದೇ ಪರಿಹಾರ; ಹಾವೇರಿಯ ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಬೇಕು; ಪ್ರೇರಣಾ ಕಾರ್ಯಾಗಾರದಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ ಒತ್ತಾಸೆ

3 HVR 7 A
Published on

ಹಾವೇರಿ: ನಿಮ್ಮೆಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ರಾಮಬಾಣ. ಧೈರ್ಯದಿಂದ, ಸಕಾರಾತ್ಮಕವಾಗಿ ಅಧ್ಯಯನ ಮಾಡಿ ಸಾಧನೆ ನಿಮ್ಮ ಹಿಂದೆ ಬರುತ್ತದೆ. ನಿಮ್ಮ ಎಲ್ಲ ಕಷ್ಟಗಳಿಗೂ ಶಿಕ್ಷಣ ಒಂದೇ ಪರಿಹಾರ. ಸರಿಯಾದ ಶಿಕ್ಷಣ ಪಡೆದರೆ ಜೀವನ ಸುಲಭ. ಇಲ್ಲದಿದ್ದರೆ ಕಷ್ಟ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ವತಿಯಿಂದ ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಗುರು ಭವನದಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಬಡ ಮತ್ತು ಕೂಲಿಕಾರರ ಮಕ್ಕಳಿಗಾಗಿ ಆಯೋಜಿಸಿದ್ದ ಒಂದು ದಿನದ ‘ಪ್ರೇರಣಾತ್ಮಕ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಜೀವನಕ್ಕೆ ಭದ್ರ ಬುನಾದಿ ಇದ್ದಂತೆ. ಇಲ್ಲಿ ಗೆದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಬೇಕು. ಯಾಲಕ್ಕಿ ಕಂಪು ಸೂಸಬೇಕು. ಇದಕ್ಕಾಗಿ ನಿರಂತರವಾಗಿ ಶಿಕ್ಷಕರು, ಪಾಲಕರ ಸಭೆ ಆಯೋಜಿಸಲಾಗುತ್ತಿದೆ. ನೀವು ಅಭ್ಯಾಸ ಮಾಡಿದರೆ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ಪ್ರಯತ್ನ ಪಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಖಾಸಗಿ ಶಾಲೆಯಲ್ಲಿ ಓದಿಲ್ಲ ಎಂಬ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಓದಿ ಅನೇಕರು ಸಾಧನೆ ಮಾಡಿದ್ದಾರೆ. ಇಲ್ಲಿ ಎಲ್ಲರಿಗೂ ಬಿಸಿಯೂಟ, ಪುಸ್ತಕ, ಬಟ್ಟೆ, ಶೂ, ಎಲ್ಲವನ್ನೂ ಕೊಡಲಾಗಿದೆ. ಎಲ್ಲ ವಿಷಯಕ್ಕೂ ಮಹತ್ವಕೊಟ್ಟು ಚೆನ್ನಾಗಿ ಓದಿ. ಎಲ್ಲರೂ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದರೆ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ಪಿಎಂ ಪೋಷಣ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿ ಝಡ್.ಎಂ.ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರಾಗಿ ಹುಟ್ಟುವುದು ತಪ್ಪಲ್ಲ. ಬಡವರಾಗಿ ಸಾಯುವುದು ತಪ್ಪು. ಸೈಕಲ್ ಮೇಲೆ ಬಟ್ಟೆ ಮಾಡುತ್ತಿದ್ದ ಧೀರುಭಾಯ್ ಅಂಬಾನಿ ಅವರ ಮಕ್ಕಳು ಈಗ ಸಾವಿರಾರು ಕೋಟ ಒಡೆಯರು. ಕಡುಬಡವನಾಗಿದ್ದ ಹುಸೇನ್ ಬೋಲ್ಟ್ ಓಲಿಂಪಿಕ್ ಬಂಗಾರದ ಪದಕ ಗೆದ್ದುಬಂದ. ಕಷ್ಟ ಅನುಭವಿಸಿ ಮೇಲೆ ಹೋದವರು ಯಶಸ್ವಿಯಾಗುವರು. ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ನೀವೂ ಯಶಸ್ಸು ಗಳಿಸಿ ಎಂದು ಕರೆ ನೀಡಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಬಿ.ನಂದ್ಯಾಲ ವಿಶೇಷ ಪ್ರೇರಣಾತ್ಮಕ ಉಪನ್ಯಾಸ ನೀಡಿದರು. ಒಂದು ಬೀಜ ಹೆಮ್ಮರವಾಗಬೇಕಾದರೆ ಮಣ್ಣು, ನೀರು, ಗೊಬ್ಬರ ಬೇಕಾಗುತ್ತದೆ. ಹಾಗೆಯೇ ಒಬ್ಬ ವಿದ್ಯಾರ್ಥಿ ಸಾಧಕನಾಗಬೇಕಾದರೆ ಶಿಕ್ಷಕ, ಪಾಲಕರು, ಶಾಲೆಯ ಸಹಕಾರ ಬೇಕು. ನಿಮಗೆ ಇದೆಲ್ಲವೂ ಸಿಕ್ಕಿದೆ. ಇದರ ಮೂಲಕ ನೀವೂ ಹೆಮ್ಮರದಂತೆ ಬೆಳೆದು ಸಾಧಕರಾಗಿ ಎಂದರು.
‘ವಿಜಯವಾಣಿ’ ಜಿಲ್ಲಾ ವರದಿಗಾರ ಕೇಶವಮೂರ್ತಿ ವಿ.ಬಿ. ಮಾತನಾಡಿ, ಮನೆ ಮನೆಗೆ ಪೇಪರ್ ಹಾಕುತ್ತಿದ್ದ ಸಾಮಾನ್ಯ ಬಾಲಕ ಅಬ್ದುಲ್ ಕಲಾಂ ಅವರು ಈ ದೇಶದ ರಾಷ್ಟ್ರಪತಿ ಆದರು. ಅದೇ ರೀತಿ ಒಂದು ಸೆಕೆಂಡ್ ಹ್ಯಾಂಡ್ ಲಾರಿಯಿಂದ ವೃತ್ತಿಜೀವನ ಪ್ರಾರಂಭಿಸಿದ ಡಾ.ವಿಜಯ ಸಂಕೇಶ್ವರ ಅವರು ಇಂದು ದೇಶದ ಅತ್ಯುನ್ನತ ಲಾಜಿಸ್ಟಿಕ್ ಕಂಪನಿ ಕಟ್ಟಿದ್ದಾರೆ. ಜತೆಗೆ ‘ವಿಜಯವಾಣಿ’ ಪತ್ರಿಕೆ ಮೂಲಕ ನಾಡಿನ ಸೇವೆ ಮಾಡುತ್ತಿದ್ದಾರೆ. ನೀವೂ ಇವರಂತೆ ಸಾಧಕರಾಗಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಮಾತನಾಡಿದರು. ಡಯಟ್ ಪ್ರಾಂಶುಪಾಲ ಗಿರೀಶ ಪದಕಿ, ಬಿಇಒ ಮೌನೇಶ ಬಡಿಗೇರ, ಮತ್ತಿತರರು ಪಾಲ್ಗೊಂಡಿದ್ದರು.
ಕಲಿಕಾ ಸಾಮಗ್ರಿ ವಿತರಣೆ
ಭಾಗವಹಿಸಿದ್ದ 250 ಮಕ್ಕಳಿಗೆ ಹುಬ್ಬಳ್ಳಿಯ ಬಾಲಾಜಿ ಟ್ರೇಡಿಂಗ್ ಕಂಪನಿಯ ಮಾಲೀಕ ರಾಜು ಹುಬ್ಬಳ್ಳಿ ತಲಾ ನಾಲ್ಕು ನೋಟ್‌ಬುಕ್, ಪೆನ್, ಕಲಿಕಾ ಸಾಮಗ್ರಿ ವಿತರಿಸಿದರು.
ಪತ್ರಿಕೆಯ ಕಾರ್ಯ ಶ್ಲಾಘನೀಯ
‘ವಿಜಯವಾಣಿ’ ಪತ್ರಿಕೆಯ ಪ್ರೇರಣೆಯಿಂದ ಇಂದು ಕೂಲಿಕಾರರ ಮಕ್ಕಳನ್ನು ಗುರುತಿಸಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಪತ್ರಿಕೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಪಿಎಂ ಪೋಷಣ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿ ಝಡ್.ಎಂ.ಖಾಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net