

ಹಾವೇರಿ: ಸ್ವಾತಂತ್ರೊೃೀತ್ಸವ ಸಂಭ್ರಮ ಇಮ್ಮಡಿಗೊಳಿಸಲು ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ 24/7 ಸುದ್ದಿವಾಹಿನಿ ವತಿಯಿಂದ ನಗರದ ಆಕ್ಸಫರ್ಡ್ ಪಿಯುಸಿ ಕಾಲೇಜ್ ಸಹಯೋಗದಲ್ಲಿ ಕಾಲೇಜ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಪದಬಂಧ’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ನಗರದ ಬಸ್ ನಿಲ್ದಾಣದ ಬಳಿ ಇರುವ ಆಕ್ಸಫರ್ಡ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದಬಂಧ ಸ್ಫರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ 56 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡಿದರು.
ಪದಬಂಧ ಸ್ಪರ್ಧೆಯ ಐವರು ವಿಜೇತರಿಗೆ ಟಿಎಚ್‌ಒ ಡಾ.ಪ್ರಭಾಕರ ಕುಂದೂರ ಅವರು ತಲಾ ಒಂದು ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಒಬ್ಬ ವಿದ್ಯಾರ್ಥಿಗೆ ಸಮಾಧಾನಕರ ಬಹುಮಾನ ಪ್ರಮಾಣ ಪತ್ರ ಕೊಡಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕು ವೈದ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, ವಿಜಯವಾಣಿ ಹಾಗೂ ದಿಗ್ವಿಜಯ ಮಾಧ್ಯಮದವರು ತಮ್ಮ ಒತ್ತಡದ ಕೆಲಸಗಳ ಮಧ್ಯೆಯೂ ಇಂತಹ ರಚನಾತ್ಮಕ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ಇಂಗ್ಲಿಷ್ ಭರಾಟೆಯಲ್ಲಿ ಕನ್ನಡವನ್ನೇ ಮರೆಯುತ್ತಿರುವ ಸಂದರ್ಭದಲ್ಲಿ ಪದಬಂಧ ಸ್ಪರ್ಧೆ ಆಯೋಜಿಸಿರುವುದು ಭಾರಿ ಉಪಯುಕ್ತವಾಗಲಿದೆ. ಎಲ್ಲರೂ ಪತ್ರಿಕೆಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಶುಪಾಲ ಪ್ರೊ.ವೀರೇಶ ಹಿತ್ತಲಮನಿ ಮಾತನಾಡಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಪರಿಶ್ರಮದ ಫಲವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ವಿಜಯವಾಣಿ ಕನ್ನಡದ ನಂಬರ್ ಒನ್ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಸಂಸ್ಥೆ ತನ್ನದೇ ಆದ ಕೊಡುಗೆ ಕೊಟ್ಟಿದೆ. ಡಾ. ವಿಜಯ ಸಂಕೇಶ್ವರ ಅವರ ಜೀವನಗಾಥೆ ಆಧಾರಿತ ‘ವಿಜಯಾನಂದ’ ಸಿನಿಮಾ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿ ಮಿತ್ರ ಪತ್ರಿಕೆ ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸುತ್ತಿದೆ ಎಂದು ಶ್ಲಾಘಿಸಿದರು.
ವಿಜಯವಾಣಿ ಜಿಲ್ಲಾ ವರದಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಜಾಹೀರಾತು ಪ್ರತಿನಿಧಿ ಸಿದ್ದು ಹಿರೇಮಠ, ಹಿರಿಯ ಪ್ರಸಾರಾಂಗ ಪ್ರತಿನಿಧಿ ಕೊಟ್ರೇಶ ಅದ್ವಾನಿಮಠ, ರಾಣೆಬೆನ್ನೂರ ವರದಿಗಾರ ಕರಿಯಪ್ಪ ಅರಳಿಕಟ್ಟಿ, ದಿಗ್ವಿಜಯ ಜಿಲ್ಲಾ ವರದಿಗಾರ ಮಾರುತಿ ಬಿ.ಎಂ., ಮತ್ತಿತರರು ಉಪಸ್ಥಿತರಿದ್ದರು.
ಭೂಮಿಕಾ ಬಡಿಗೇರ ಪ್ರಾರ್ಥಿಸಿದರು. ಪ್ರೊ.ವೀರೇಶ ಹಿತ್ತಲಮನಿ ಸ್ವಾಗತಿಸಿದರು. ಮೆಹರ್‌ನಿಘಾರ್ ನದಾಫ ನಿರೂಪಿಸಿದರು.
ಸ್ಪರ್ಧೆಯ ವಿಜೇತರಿವರು
1) ವಂದಿತಾ ಜೋಗ (ಕೆಎಲ್‌ಇ ಜಿಎಚ್ ಕಾಲೇಜು, ಹಾವೇರಿ)
2) ಶರಣಕುಮಾರ ಜಾಲಿಹಾಳ (ಕೆಯು ಪಿಜಿ ಸೆಂಟರ್, ಹಾವೇರಿ)
3) ಸಂಧ್ಯಾ ನಾಯಕ (ಕೆಯು ಪಿಜಿ ಸೆಂಟರ್, ಹಾವೇರಿ)
4) ಗಾಯತ್ರಿ ಹೂಗಾರ (ಸರ್ಕಾರಿ ಪದವಿ ಮಹಾವಿದ್ಯಾಲಯ, ಗಾಂಧಿಪುರ)
5) ಜಾಲಮ್ಮ ಗಾಜಿ (ಕೆಯು ಪಿಜಿ ಸೆಂಟರ್, ಹಾವೇರಿ)
6) ಪ್ರದೀಪ ಎಲ್.ಜಿ. (ಆಕ್ಸಫರ್ಡ್ ಪಿಯು ಕಾಲೇಜ್, ಹಾವೇರಿ)