ಪತ್ರಿಕಾ ವಿತರಕರ ಇ-ಶ್ರಮ ನೋಂದಣಿ ಅಭಿಯಾನ ಜ.17ರಂದು; ವಿಜಯವಾಣಿ, ಪತ್ರಿಕಾ ವಿತರಕರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಹಯೋಗ

Paper Boy
Published on

ಹಾವೇರಿ: ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರದ ಜತೆಗೆ ವೈದ್ಯಕೀಯ ಚಿಕಿತ್ಸೆಗೆ ವೆಚ್ಚ ಭರಿಸುವ ರಾಜ್ಯ ಸರ್ಕಾರದ ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಅಭಿಯಾನವನ್ನು ಜ.17ರಂದು ನಗರದ ಪಿಬಿ ರಸ್ತೆಯ ವಿಜಯವಾಣಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’, ಪತ್ರಿಕಾ ವಿತರಕರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಅಭಿಯಾನ ಆಯೋಜಿಸಲಾಗಿದೆ. ಚಳಿ, ಗಾಳಿಯನ್ನು ಲೆಕ್ಕಿಸದೇ ಮನೆ ಮನೆಗೆ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ವಿತರಕರಿಗೆ ಇಲಾಖೆ ವತಿಯಿಂದ ಇ ಶ್ರಮ ನೋಂದಣಿ ಮಾಡಿಸಲಾಗುತ್ತಿದೆ.
ಇಲ್ಲಿನ ಪಿಬಿ ರಸ್ತೆಯ ಪಂಡಿತ ಆಸ್ಪತ್ರೆ ಎದುರಿನ ಲಕ್ಷ್ಮೀ ಕಾಂಪ್ಲೆಕ್ಸ್‌ನ ಮೊದಲ ಮಹಡಿಯ ವಿಜಯವಾಣಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಇ-ಶ್ರಮ ನೋಂದಣಿ ಅಭಿಯಾನ ನಡೆಯಲಿದೆ. ಎಲ್ಲ ಪತ್ರಿಕಾ ವಿತರಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪತ್ರಿಕಾ ವಿತರಕರ ಸಂಘ ಮನವಿ ಮಾಡಿದೆ.
ಈ ದಾಖಲೆ ತನ್ನಿ : ಆಸಕ್ತ ವಿತರಕರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆಯ ವಿವರ, ಆಧಾರ್‌ನಲ್ಲಿ ಅಪ್‌ಡೇಟ್ ಆಗಿರುವ ಮೊಬೈಲ್, ನಾಮಿನಿ ವಿವರ ತರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net