ಹಾವೇರಿ ಪಿಬಿ ರಸ್ತೆ ದುರಸ್ಥಿ ಕಾರ್ಯ ಆರಂಭ; ವಿಜಯವಾಣಿ ವರದಿ ಪರಿಣಾಮ; ಗುಂಡಿ ಅವಾಂತರಕ್ಕೆ ಸಿಗಲಿದೆ ಬ್ರೇಕ್

6 HVR 4 A
Published on

ಹಾವೇರಿ: ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ ಉಂಟಾಗಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಎಜಿಪಿ ಗ್ಯಾಸ್ ಪೈಪ್‌ಲೈನ್ ಕಂಪನಿ ಗುತ್ತಿಗೆದಾರರು ಕೊನೆಗೂ ಮುಂದಾಗಿದ್ದಾರೆ. ಇದರಿಂದ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ ಉಂಟಾಗಿರುವ ಗುಂಡಿ ಅವಾಂತರಕ್ಕೆ ಬ್ರೇಕ್ ಸಿಗಲಿದೆ.
ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗುತ್ತಿತ್ತು. ನಗರದ ಪ್ರಮುಖ ಹಳೇ ಪಿಬಿ ರಸ್ತೆಯುದ್ದಕ್ಕೂ ಗ್ಯಾಸ್ ಪೈಪ್‌ಲೈನ್ ಅಳವಡಿಸಿ ಬೇಕಾಬಿಟ್ಟಿ ಗುಂಡಿ ಮುಚ್ಚಲಾಗಿತ್ತು. ಈ ಕುರಿತು ‘ಗ್ಯಾಸ್ ಪೈಪ್‌ಲೈನ್ ಅದ್ವಾನ ಜನ ಹೈರಾಣ’ ಹಾಗೂ ‘ಗ್ಯಾಸ್ ಪೈಪ್ಲೈನ್ ಗುಂಡಿ ಅವಾಂತರ’ ಶೀರ್ಷಿಕೆಯಡಿ ‘ವಿಜಯವಾಣಿ’ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಜಿಪಿ ಕಂಪನಿ ಹಾಗೂ ಗುತ್ತಿಗೆದಾರರು ಗುಂಡಿಗಳನ್ನು ಸರಿಯಾಗಿ ಮುಚ್ಚಿ, ರೋಲರ್ ಮೂಲಕ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಳೆಗಾಲ ಇರುವ ಕಾರಣ ಗುಂಡಿ ಅಗೆಯುವ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸದ್ಯ ಅಗೆದಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿ ರೋಲರ್ ಮಾಡಲು ಆರಂಭಿಸಿದ್ದಾರೆ. ಜೆಎಸ್‌ಬಿ ಹಾಗೂ ಡಬ್ಲೂೃಎಂ ಹಾಕಿ ರೋಲರ್ ಮಾಡಿಸಲಾಗುತ್ತಿದೆ. ಮಳೆ ನಿಂತ ಬಳಿಕ ಮತ್ತೊಮ್ಮೆ ರೋಲರ್ ಮಾಡಿಸಿ ಗುಣಮಟ್ಟದ ಡಾಂಬರ್ ಮಾಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಎಂ.ಎಸ್.ಮೇಡ್ಲೇರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ನೋಟಿಸ್
ಜಿಲ್ಲಾಧಿಕಾರಿಯವರ ಸೂಚನೆಯಂತೆ ನಗರದಲ್ಲಿ ಎಲ್ಲೆಲ್ಲಿ ಗುಂಡಿ ಅಗೆದು ಅರೆಬರೆ ಕಾಮಗಾರಿ ಮಾಡಲಾಗಿದೆ ಎಂದು ಗುರುತಿಸಿ, ಎಲ್ಲ ಕಡೆ ಮೊದಲಿದ್ದ ಹಾಗೆ ದುರಸ್ಥಿ ಮಾಡುವಂತೆ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಪಡೆದಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು ಎಂದು ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ತಿಳಿಸಿದ್ದಾರೆ.

ಕೋಟ್:
ಹಾವೇರಿ ನಗರದ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಅವ್ಯವಸ್ಥೆ ಬಗ್ಗೆ ‘ವಿಜಯವಾಣಿ’ ಗಮನಕ್ಕೆ ತಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸುವ ಮೂಲಕ ಶುಕ್ರವಾರದಿಂದಲೇ ದುರಸ್ಥಿ ಕಾರ್ಯ ಆರಂಭಿಸಲಾಗಿದೆ. ಸದ್ಯದಲ್ಲೇ ಈ ಕುರಿತು ನಾನೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಕಾಮಗಾರಿಯ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ.
> ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net