ಮನೆ ಮನೆಗೆ ಶ್ರೀರಾಮನ ಅಕ್ಷತೆ ವಿತರಣೆ ಇಂದು; ಜಿಲ್ಲೆಯಾದ್ಯಂತ 700 ಗ್ರಾಮಗಳಲ್ಲಿ 700 ತಂಡ ರಚನೆ; ಆರತಿ ಎತ್ತಿ ಸ್ವಾಗತಿಸಲು ಸಜ್ಜಾದ ಭಕ್ತರು

6 HVR 7
Published on

ಹಾವೇರಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನಿಂದ ಬಂದಿರುವ ಶ್ರೀರಾಮನ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನ ಜಿಲ್ಲೆಯಲ್ಲಿ ಭಾನುವಾರ ಏಕಕಾಲದಲ್ಲಿ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯ 700 ಗ್ರಾಮಗಳಲ್ಲಿ ಸುಮಾರು 700 ತಂಡಗಳು ಸನ್ನದ್ಧವಾಗಿವೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದು ಪರಿಷತ್, ಸರಿದಂತೆ ವಿವಿಧ ಹಿಂದು ಸಂಘಟನೆಗಳು ಡಿ.29ರಂದು ಹಾವೇರಿಯ ಹುಕ್ಕೇರಿ ಮಠದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಸ್ವಾಗತಿಸಿದ್ದವು. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪೂಜೆ ನೆರವೇರಿಸಿ ಅಕ್ಷತೆಯನ್ನು ಕಾರ್ಯಕರ್ತರ ಕೈಗೆ ಹಸ್ತಾಂತರಿಸಿದ್ದರು. ಜ.7ರಂದು ಜಿಲ್ಲೆಯಾದ್ಯಂತ ಒಂದೇ ದಿನ ಅಕ್ಷತೆ ಹಂಚಲು ಕಾರ್ಯಕರ್ತರ ತಂಡ ನಿರ್ಧರಿಸಿತ್ತು.
ಅಕ್ಷತೆಯನ್ನು ಮನೆ ಮನೆಗೆ ಹಂಚಲೆಂದು ಜಿಲ್ಲೆಯಾದ್ಯಂತ ಸಾವಿರಾರು ಕಾರ್ಯಕರ್ತರು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 700 ಗ್ರಾಮಗಳಲ್ಲಿ 700 ತಂಡಗಳನ್ನು ರಚಿಸಿದ್ದಾರೆ. ಒಂದೊಂದು ತಂಡದಲ್ಲಿ ನಾಲ್ಕೈದು ಕಾರ್ಯಕರ್ತರು ಇದ್ದಾರೆ.
ಈ ತಂಡ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿ ಮನೆ ಮನೆಗೆ ತೆರಳಿ ರಾಮನ ಅಕ್ಷತೆ, ಜ.22ರಂದು ಉದ್ಘಾಟನೆಯಾಗಲಿರುವ ಅಯೋಧ್ಯೆ ರಾಮಮಂದಿರದ ಮಾಹಿತಿಯುಳ್ಳ ಕರಪತ್ರ ಹಾಗೂ ರಾಮನ ಭಾವಚಿತ್ರವನ್ನು ತಲುಪಿಸಲಿದೆ. ಬೆಳಗ್ಗೆ ಗ್ರಾಮವಾರು, ವಾರ್ಡ್‌ವಾರು ಸ್ಥಳೀಯ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ವಿತರಣೆ ಆರಂಭಿಸಲಾಗುವುದು. ಸಂಜೆವರೆಗೆ ಹಂಚಿಕೆ ಮಾಡಲಾಗುವುದು. ಎಲ್ಲ ಮನೆಗಳಿಗೆ ತಲುಪಲು ಆಗದಿದ್ದಲ್ಲಿ ಸೋಮವಾರ ಮುಂದುವರೆಸಲಾಗುವುದು ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅನೀಲ ಹಲವಾಗಿಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ತಿಂಗಳಿನಿಂದ ತಯಾರಿ
ರಾಮನ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಲು ನೂರಾರು ರಾಮನ ಕಾರ್ಯಕರ್ತರು ಸುಮಾರು ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದ್ದಾರೆ. ಜನವರಿ 1ರಿಂದ 14ವರೆಗೆ ಮಂತ್ರಾಕ್ಷತೆ ವಿತರಣೆಗೆ ಕೇಂದ್ರದಿಂದ ಸೂಚನೆ ಇದೆ. ಆದರೆ, ಜಿಲ್ಲೆಯಲ್ಲಿ ಒಂದೇ ದಿನ ವಿತರಿಸಲು ಜಿಲ್ಲಾ ತಂಡ ವಿಶೇಷ ಯೋಜನೆ ರೂಪಿಸಿದೆ. ಇದಕ್ಕಾಗಿ ಸಾವಿರಾರು ಕಾರ್ಯಕರ್ತರ ತಂಡ ರಚಿಸಿ ಗ್ರಾಮ, ಊರು, ಬಡಾವಣೆಗಳಲ್ಲಿ ಸಿದ್ಧತೆ ನಡೆಸಿರುವುದು ವಿಶೇಷ. ಅಕ್ಷತೆ ಸ್ವಾಗತಿಸಲು ಉತ್ಸುಕರಾಗಿರುವ ಭಕ್ತರು, ಮನೆಯ ಮುಂದೆ ರಂಗೋಲಿ ಬಿಡಿಸಿ, ಪುಷ್ಪಾರ್ಚನೆ ಮಾಡಿ, ಆರತಿ ಎತ್ತಿ ಸ್ವಾಗತಿಸಲು ಸಜ್ಜಾಗಿದ್ದಾರೆ.

  • ರಾಮನ ಅಕ್ಷತೆ, ಕರಪತ್ರ, ಭಾವಚಿತ್ರ ವಿತರಣೆ
  • ಮನೆ ಮನೆಗೆ ಆಗಮಿಸಲಿರುವ ರಾಮ ಭಕ್ತರು
  • ಗ್ರಾಮ, ವಾರ್ಡ್, ಬಡಾವಣೆಗಳಲ್ಲಿ ಜೈಶ್ರೀರಾಮ್ ಉದ್ಘೋಷಕ್ಕೆ ಸಜ್ಜು
  • ಆರತಿ ಎತ್ತಿ ಮನೆಗೆ ಅಕ್ಷತೆ ಸ್ವಾಗತಿಸಲು ಭಕ್ತರು ಸಜ್ಜು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net