

ಹಾವೇರಿ: ವಿಶ್ವ ಹಿಂದು ಪರಿಷತ್ ಬಜರಂಗದಳ ಜಿಲ್ಲಾ ಘಟಕದ ವತಿಯಿಂದ 10ನೇ ವರ್ಷದ ಹನುಮ ಮಾಲಾಧಾರಣೆ ಹಾಗೂ ಸಂಕೀರ್ತನಾ ಯಾತ್ರೆ ನಗರದಲ್ಲಿ ಇತ್ತೀಚೆಗೆ ಜರುಗಿತು.
ನಗರದ ಮುರುಘಾ ಮಠದಲ್ಲಿ ಆಂಜನೇಯನ ಮೂರ್ತಿಯ ಭವ್ಯ ಮೆರವಣಿಗೆ ಆರಂಭಿಸಲಾಯಿತು. ಕಲ್ಲು ಮಂಟಪ ರಸ್ತೆ, ಎಂಜಿ ಸರ್ಕಲ್, ಜೆಪಿ ವೃತ್ತ, ಬಸವೇಶ್ವರ ವೃತ್ತ, ಸುಭಾಸ ಸರ್ಕಲ್, ಅಂಬೇಡ್ಕರ್ ವೃತ್ತ, ಪುರದ ಓಣಿ, ಎಂಜಿ ರಸ್ತೆ, ದ್ಯಾಮವ್ವನ ಪಾದಗಟ್ಟಿ, ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಮುರುಘಾ ಮಠದಲ್ಲಿ ಸಂಕೀರ್ತನಾ ಯಾತ್ರೆ ಸಮಾಪ್ತಿಗೊಂಡಿತು. ನಂತರ ಪ್ರಸಾದ ವಿತರಿಸಲಾಯಿತು. ಮೆರವಣಿಗೆ ಉದ್ದಕ್ಕೂ ಮಾಲಾಧಾರಿಗಳು ಹನುಮನ ಭಜನೆ, ರಾಮ ಜಯಘೋಷ ಮೊಳಗಿಸಿದರು.
ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲು, ತಾಲೂಕು ಸಂಯೋಜಕ ಸಂತೋಷ ನೂರಂದೇವರಮಠ, ಗಗನ ಆನವಟ್ಟಿ, ಇತರರಿದ್ದರು.
1,120 ಮಾಲಾಧಾರಿಗಳು :
ಜಿಲ್ಲೆಯ ಎಂಟು ತಾಲೂಕಿನಿಂದ ಈ ಬಾರಿ 1,120 ಮಾಲಾಧಾರಿಗಳು ಅಂಜನಾದ್ರಿ ಪರ್ವತಕ್ಕೆ ಆಗಮಿಸುತ್ತಿದ್ದಾರೆ. ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ ಹಾಗೂ ಕೋಡದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಾಗಿದೆ. ಗುರುವಾರ ಕೋಡ ಗ್ರಾಮದಿಂದ ಪ್ರತ್ಯೇಕ ಬಸ್‌ಗಳ ಮೂಲಕ ಕೊಪ್ಪಳ ಜಿಲ್ಲೆಯ ಹನುಮನ ಜನ್ಮಸ್ಥಳ ಅಂಜನಾದ್ರಿ ಪರ್ವತಕ್ಕೆ ಯಾತ್ರೆಗೆ ಚಾಲನೆ ನೀಡಲಾಗಿದೆ. ಡಿ.13ರಂದು ಅಂಜನಾದ್ರಿ ಪರ್ವತದಲ್ಲಿ ಮಾಲೆ ವಿಸರ್ಜನೆ ಮಾಡಲಾಗುವುದು ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲು ತಿಳಿಸಿದ್ದಾರೆ.