

ಹಾವೇರಿ: ಇಲ್ಲಿನ ಕಾಗಿನೆಲೆ ವೃತ್ತದಲ್ಲಿ ವಿಶ್ವಹಿಂದು ಪರಿಷತ್ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾ ಗಣಪತಿಯ ಶೋಭಾಯಾತ್ರೆ ಮೆರವಣಿಗೆ ಸೋಮವಾರ ಅದ್ಧೂರಿಯಾಗಿ ಜರುಗಿತು.
ಕಾಗಿನೆಲೆ ವೃತ್ತದಲ್ಲಿ ಬೆಳಗ್ಗೆ 10.30ಕ್ಕೆ ಶೋಭಾಯಾತ್ರೆಗೆ ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹಾಗೂ ಗವಿಸಿದ್ದಪ್ಪ ದ್ಯಾಮಣ್ಣನವರ ಚಾಲನೆ ನೀಡಿದರು. ಅಲ್ಲಿಂದ ಕಲ್ಲುಮಂಟಪ ರಸ್ತೆ, ನಂದಿ ಫೋಟೋ ಸ್ಟುಡಿಯೋ, ಹಳೇ ಪೋಸ್ಟ್ ಆಫೀಸ್ ರೋಡ್, ಸುಭಾಷ ಸರ್ಕಲ್, ಚೌಡೇಶ್ವರಿ ಸರ್ಕಲ್, ಪುರದ ಓಣಿ, ಎಂ.ಜಿ.ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಸಾಗಿತು. ಅಲ್ಲಿಂದ ಗಣಪತಿ ಮೂರ್ತಿಯನ್ನು ಕುಣಿಮೆಳ್ಳಿಹಳ್ಳಿ ಗ್ರಾಮದ ಬಳಿ ಇರುವ ವರದಾ ನದಿ ದಂಡೆಗೆ ತೆಗೆದುಕೊಂಡು ಹೋಗಿ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಮೂರು ಬೃಹತ್ ಡಿಜೆ ಅಳವಡಿಸಲಾಗಿತ್ತು. ಯುವಕ- ಯುವತಿಯರು, ಮಕ್ಕಳು ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಭಾಗವಾ ಧ್ವಜ ಹಿಡಿದು ಗಣಪತಿ ಬಪ್ಪಾ ಮೋರಯಾ ಎಂದು ಘೋಷಣೆ ಕೂಗಿದರು. ಮನೆ ಮುಂದೆ ಬಂದ ಗಣಪನಿಗೆ ಭಕ್ತರು ಹಣ್ಣು- ಕಾಯಿ ನೈವೇದ್ಯ ಮಾಡಿ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಭಜರಂಗದಳದ ಪ್ರವೀಣ ಗಾಣಗೇರ, ವರುಣ ಆನವಟ್ಟಿ, ಶಂಭು ಹತ್ತಿ, ಅಜ್ಜಪ್ಪ ಗಾಣಗೇರ, ಅಶೋಕ ಗಾಣಗೇರ, ಸಂತೋಷ ಆಲದಕಟ್ಟಿ, ಚಂದ್ರು ಮಡಿವಾಳರ, ರುದ್ರೇಶ ಚಿನ್ನಣ್ಣವರ, ಶಶಿಧರ ಹೊಸಳ್ಳಿ, ಪ್ರಭು ಹಿಡ್ನಳ್ಳಿ, ಇತರರು ಭಾಗವಹಿಸಿದ್ದರು.