

ಹಾವೇರಿ: ಅಯೋಧ್ಯೆಯ ರಾಮಮಂದಿರಕ್ಕಾಗಿ 1828ರಿಂದ 2019ರವರೆಗೆ ಬಹುದೊಡ್ಡ ಆಂದೋಲನವೇ ನಡೆಯಿತು. ಇದರಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಈ ಮೂಲಕ ರಾಮಭಕ್ತಿ ಕೇವಲ ರಾಮಭಕ್ತಿಯಾಗಿರದೇ ದೇಶಭಕ್ತಿಯಾಗಿ ಪರಿವರ್ತನೆಯಾಯಿತು ಎಂದು ಹುಬ್ಬಳ್ಳಿಯ ಧನ್ಯೋಸ್ಮಿ ಯೋಗ ವಿಜ್ಞಾನ ಕೇಂದ್ರದ ಸಂಸ್ಥಾಪಕ ವಿನಾಯಕ ತಲಗೇರಿ ಹೇಳಿದರು.
ಇಲ್ಲಿನ ವೀರಭದ್ರೇಶ್ವರದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಜಿಸಿದ್ದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
1828ರ ಸಂದರ್ಭದಲ್ಲಿ ಬಾಬರನು, ವಿಕ್ರಮಾದಿತ್ಯ ನಿರ್ಮಿಸಿದ್ದ ರಾಮಮಂದಿರ ಒಡೆದು ಆತನ ಹೆಸರಲ್ಲಿ ಮಸೀದಿ ಕಟ್ಟಿಸಿದ. ನಂತರ ರಾಮಮಂದಿರ ಹೋರಾಟ ಶುರುವಾಯಿತು. ರಾಮಲಲ್ಲಾನ ವಿಗ್ರಹ ಕಾಣಿಸಿಕೊಂಡ ಬಳಿಕ ದೇಶದೆಲ್ಲೆಡೆ ವ್ಯಾಪಿಸಿತು. ದೇಶದಾದ್ಯಂತ ರಥಯಾತ್ರೆಗಳು ನಡೆದವು. 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ ಮಾಡಿದಾಗ ಅನೇಕರು ಪ್ರಾಣ ಕಳೆದುಕೊಂಡರು. ಸೆಪ್ಟೆಂಬರ್ 23, 2022ರಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಿಂದಾಗಿ ರಾಮಭಕ್ತರ ಹೋರಾಟ ಸಾರ್ಥಕವಾಯಿತು. ರಾಮಮಂದಿರ ಕಣ್ತುಂಬಿಕೊಳ್ಳಲಿರುವ ನಾವೇ ಪುಣ್ಯವಂತರು ಎಂದರು.
ಸಮಾರಂಭದಲ್ಲಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದ ಮಠದ ಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಆರ್‌ಎಸ್‌ಎಸ್ ವಿಭಾಗ ವ್ಯವಸ್ಥಾ ಪ್ರಮುಖ ಅಶೋಕ ನಾಡಿಗೇರ, ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ, ಜಿಲ್ಲಾ ಕಾರ್ಯವಾಹ ಯೋಗೀಂದ್ರ ಹೊಳಬಾಗಿಲು, ಹಾವೇರಿ ಜಿಲ್ಲಾ ಸಂಘಚಾಲಕ ಶ್ರೀಕಾಂತ ಹುಲ್ಮನಿ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲ, ನಾಗರಾಜ ಕುಲಕರ್ಣಿ, ಅಜಯ ಮಠದ, ಪ್ರವೀಣ ಲಿಂಗೇರಿ, ರುದ್ರೇಶ ಚಿನ್ನಣ್ಣವರ, ಸಂತೋಷ ಆಲದಕಟ್ಟಿ, ಗಂಗಾಧರ ಮಾಮಲೆಪಟ್ಟಣಶೆಟ್ಟಿ, ಜಗದೀಶ ಕನವಳ್ಳಿ, ಚನ್ನಮ್ಮ ಬ್ಯಾಡಗಿ, ರಾಜೇಶ್ವರಿ ಬಿಷ್ಟನಗೌಡ್ರ, ಲಲಿತಾ ಗುಂಡೇನಹಳ್ಳಿ, ಮತ್ತಿತರರು ಪಾಲ್ಗೊಂಡಿದ್ದರು.
ಮನೆ ಮನೆಗೆ ಮಂತ್ರಾಕ್ಷತೆ
ಅಯೋಧ್ಯೆಯಲ್ಲಿ ಜನವರಿ 22ರಂದು ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಜಿಲ್ಲೆಯ 700 ಹಳ್ಳಿಗಳಿಗೂ ರಾಮನ ಫೋಟೋ, ಅಕ್ಷತೆ, ಕರಪತ್ರವನ್ನು ಜ.7ರಂದು ಮನೆ ಮನೆಗೆ ತಲುಪಿಸಲಾಗುತ್ತಿದೆ. ಜ.22ರಂದು ಪಟಾಕಿ ಸಿಡಿಸಬೇಡಿ. ಮೆರವಣಿಗೆ ಬೇಡ. ಮಂದಿರಗಳಲ್ಲಿ ಪೂಜೆ, ಭಜನೆ ಮಾಡಿ ಎಂದು ಅಯೋಧ್ಯೆಯಿಂದ ಸಂದೇಶ ಬಂದಿದೆ ಎಂದು ವಿನಾಯಕ ತಲಗೇರಿ ತಿಳಿಸಿದರು.