

ಹಾವೇರಿ: ವಿಶ್ವ ಹಿಂದು ಪರಿಷತ್ ಹಾವೇರಿ ಜಿಲ್ಲಾ ಘಟಕ ಹಾಗೂ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ನಗರದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಮಂತ್ರಾಕ್ಷತೆ ಹೊತ್ತ ರಾಮಭಕ್ತರು ರಾಮನಾಮ ಭಜನೆ ಮಾಡುವ ಮೂಲಕ ಭಕ್ತಿ ಮೆರೆದರು.
ನಗರದ ಹುಕ್ಕೇರಿ ಮಠದಲ್ಲಿ ಶ್ರೀ ಸದಾಶಿವ ಸ್ವಾಮೀಜಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಭಾವಚಿತ್ರವನ್ನು ಸಾರೋಟನಲ್ಲಿ ಇರಿಸಿ ಮೆರವಣಿಗೆ ಆರಂಭಿಸಲಾಯಿತು. ಕುಂಭ ಹೊತ್ತ ನೂರಾರು ಮಹಿಳೆಯರು ಗಮನ ಸೆಳೆದರು. ರಾಮನ ಮಂತ್ರಾಕ್ಷತೆಗೆ ಸಾರ್ವಜನಿಕರು ಹೂವು ಚೆಲ್ಲಿದರು. ಜಾಂಜ್ ಮೇಳ, ಕೇಸರಿ ಶಾಲುಗಳು ರ‌್ಯಾಲಿಯಲ್ಲಿ ಗಮನ ಸೆಳೆದವು. ಮೆರವಣಿಗೆ ಎಂಜಿ ರಸ್ತೆ ಮುಖಾಂತರ ಸಾಗಿ ಶ್ರೀರಾಮಮಂದಿರದಲ್ಲಿ ಮುಕ್ತಾಯಗೊಂಡಿತು.
ಕೋಟ್ಯಂತರ ಭಾರತೀಯರ ಕನಸು ನನಸು
ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯ ರ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಈ ಮೂಲಕ ಭಾರತ ಮತ್ತೆ ವಿಶ್ವಗುರು ಆಗುವ ಭರವಸೆ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಸಮಸ್ತ ರಾಮಭಕ್ತರಿಂದ ಮಂದಿರ ನಿರ್ಮಾಣವಾಗುತ್ತಿದೆ.
ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ದೇಶದ ಏಕತೆ ಸಾರುವ ಒಂದು ಶುಭ ಸಂದರ್ಭ ಇದಾಗಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಎಲ್ಲ ಮನೆ, ಮನ ತುಂಬಲಿ ಎಂದು ಹಾರೈಸಿದರು.