

ಹಾವೇರಿ: ತಾಯಂದಿರರು ಮಕ್ಕಳಿಗೆ ವಚನ ಸಂಸ್ಕಾರ ಬೀಜವನ್ನು ಬಿತ್ತಬೇಕು. ಬಸವಾದಿ ಶರಣರ ಚರಿತ್ರೆಗಳನ್ನು ಮಕ್ಕಳಿಗೆ ತಿಳಿಸಬೇಕು. ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳನ್ನು ಅರ್ಥ ಮಾಡಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್ ಕೋರಿಶೆಟ್ಟರ ಕಿವಿಮಾತು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಇಲ್ಲಿನ ದಾನೇಶ್ವರ ನಗರದ ಪದವಿಪೂರ್ವ ನೌಕರರ ಸಂಘದ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಚನ ಕಂಠಪಾಠ, ರಂಗೋಲಿ ಹಾಗೂ ಸ್ವರಚಿತ ಕವನ ವಾಚನ ಸ್ಪರ್ಧೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಏ.30ರಂದು ಬಸವ ಜಯಂತಿ ಹಾಗೂ ಇತರ ದಾರ್ಶನಿಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸ್ಪರ್ಧೆಯ ವಿಜೇತರಿಗೆ ಬಸವ ಜಯಂತಿ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಷಣ್ಮುಖಪ್ಪ ಉಳ್ಳಾಗಡ್ಡಿ ಮಾತನಾಡಿದರು.
ಸ್ವರಚಿತ ಕವನ ವಾಚನ ಸ್ಪರ್ಧೆಗೆ ಸಾಹಿತಿ ಹನಮಂತಗೌಡ ಗೊಲ್ಲರ, ಜುಬೇಧಾ ನಾಯಕ, ರಂಗೋಲಿ ಸ್ಪರ್ಧೆಗೆ ಚಿತ್ರಕಲಾ ಶಿಕ್ಷಕ ಗಂಗಾಧರಯ್ಯ ಹಿರೇಮಠ ಹಾಗೂ ಜೆ.ಪಿ ನದಾಫ ಮತ್ತು ವಚನ ಕಂಠಪಾಠ ಸ್ಪರ್ಧೆಗೆ ಜಿಲ್ಲಾ ಕದಳಿ ವೇದಿಕೆಯ ಅಮೃತಮ್ಮ ಶೀಲವಂತರ ಹಾಗೂ ಶಿವಲೀಲಾ ಅಂಕಲಕೋಟಿ ನಿರ್ಣಾಯಕರಾಗಿದ್ದರು.
ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ರಾಜ್ಯ ಮಹಿಳಾ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯೆ ಕಮಲಾ ಬುಕ್ಕಶೆಟ್ಟಿ, ಕರಬಸನಗೌಡ ಪಾಟೀಲ, ಇತರರಿದ್ದರು.
ಅಕ್ಕಮಹಾದೇವಿ ಭರತನೂರಮಠ, ನೀಲಮ್ಮ ನಿಂಬರಗಿ, ನೀಲಮ್ಮ ಗೌಡಪ್ಪನವರ, ಅಶ್ವಿನಿ ಟೊಂಕದ, ಶ್ವೇತಾ ತುಪ್ಪದ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭು ಮರಗೂರ ಸ್ವಾಗತಿಸಿದರು. ಜಿಲ್ಲಾ ಘಟಕದ ಉಪಾಧ್ಯಕ್ಷೆ ದ್ರಾಕ್ಷಾಯಣಿ ಗಾಣಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಕ್ಷರಪ್ಪ ಮಳಿಮಠ ನಿರೂಪಿಸಿದರು. ವೀರನಗೌಡ ಗೌಡರ ವಂದಿಸಿದರು.