ಶಾಸಕ ಯತ್ನಾಳ ಗಡಿಪಾರು ಮಾಡಿ; ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಒತ್ತಾಯ

Published on

ಹಾವೇರಿ: ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಬಗ್ಗೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವಹೇಳನಕಾರಿ ಪದ ಬಳಸಿರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ. ಹಾಗಾಗಿ, ಅವರನ್ನು ರಾಜ್ಯ ಸರ್ಕಾರ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಒತ್ತಾಯಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಅಂದರೆ ಮೂರು ಕುಟುಂಬದ ಸ್ವತ್ತು ಎಂದು ಹೇಳಿಕೆ ನೀಡಿರುವುದನ್ನು ಮಹಾಸಭಾ ಖಂಡಿಸುತ್ತದೆ. ಲೋಕನಾಯಕ ಭೀಮಣ್ಣ ಖಂಡ್ರೆ ಅವರು ಮಹಾಸಭೆಯ ಅಧ್ಯಕ್ಷರಾದ ನಂತರ ನೂರು ವರ್ಷ ಗತಿಸಿದ ನಂತರ ಬೆಂಗಳೂರು ನಗರದಲ್ಲಿ ಸ್ವಂತ ಕಚೇರಿ ಸ್ಥಾಪಿಸಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಎಲ್ಲ ವರ್ಗಗಳ ಮಠ, ಮಂದಿರಗಳಿಗೆ ಹಣಕಾಸಿನ ನೆರವು ನೀಡಿ ಜೀರ್ಣೋದ್ಧಾರ ಮಾಡಿದರು. ಶಾಮನೂರ ಶಿವಶಂಕರಪ್ಪನವರು ಮಹಾಸಭೆಯ ಅಧ್ಯಕ್ಷರಾದ ನಂತರ ವೀರಶೈವ ಲಿಂಗಾಯತರಿಗೆ ಸರ್ಕಾರ ನೋವುಂಟು ಮಾಡಿದಾಗ ಅವರದ್ದೇ ಸರ್ಕಾರ ಇದ್ದರೂ ವಿರೋಧಿಸುವ ಮೂಲಕ ವೀರಶೈವ ಲಿಂಗಾಯತರನ್ನು ಒಂದುಗೂಡಿಸಿ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.

ಬಸವೇಶ್ವರರು ಹಾಗೂ ಮಹಾಸಭಾ ಬಗೆಗೆ ಯತ್ನಾಳ ಹಗುರವಾಗಿ ಮಾತನಾಡಿದ್ದಲ್ಲದೇ ತಮ್ಮ ಹೇಳಿಕೆಯನ್ನು ಸಮರ್ಥಿಸಿರುವುದು ಅತ್ಯಂತ ಖಂಡನೀಯ. ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿ ಇಂಥವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕೋರಿಶೆಟ್ಟರ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net