

ಹಾವೇರಿ: ರಾಜ್ಯ ಸರ್ಕಾರ ಸೆ.22ರಿಂದ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವರು ಹಾಗೂ ಲಿಂಗಾಯತರು ತಪ್ಪದೇ ಭಾಗವಹಿಸಬೇಕು. ಧರ್ಮದ ಕಾಲಂನಲ್ಲಿ ‘ಇತರೇ’ ಎಂದು ನೀಡಿರುವ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಸೇರಿಸಿ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ ಗುರು ಚರ ಮೂರ್ತಿಗಳ ಮಾರ್ಗದರ್ಶನದಲ್ಲಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಸಮುದಾಯದ ಜನರು ಜಾತಿ ಕಾಲಂನಲ್ಲಿ ‘ಲಿಂಗಾಯತ’ ಅಥವಾ ‘ವೀರಶೈವ’ ಎಂದು ಉಪಜಾತಿ ಕಾಲಂನಲ್ಲಿ ಸಂಕೇತ ಸಂಖ್ಯೆಗಳನ್ನು ಖಚಿತಪಡಿಸಿಕೊಂಡು ತಮ್ಮ ಉಪಜಾತಿ ಸೇರಿಸಿ ಎಂದರು.
ಸೆ.19ರಂದು ಹುಬ್ಬಳ್ಳಿಯಲ್ಲಿ ಮಹಾಸಭಾದಿಂದ ಆಯೋಜಿಸಿರುವ ಏಕತಾ ಸಮಾವೇಶದಲ್ಲಿ ಜಿಲ್ಲೆಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲ ತಾಲೂಕುಗಳ ಘಟಕದಿಂದ ಹೆಚ್ಚು ಜನ ಭಾಗವಹಿಸಬೇಕು. ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರು ಏನು ಬರೆಸಬೇಕು ಎಂಬ ಕುರಿತು ಸ್ವಾಮೀಜಿಗಳಿಂದಲೇ ಗೊಂದಲಮಯ ಹೇಳಿಕೆಗಳು ವ್ಯಕ್ತವಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೋರಿಶೆಟ್ಟರ್, ಮಹಾಸಭಾದ ನಿರ್ಣಯಕ್ಕೆ ಬಹುತೇಕ ಎಲ್ಲರೂ ಸಹಮತ ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ ಇದೆ. ಕೆಲವರ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಭು ಚಕ್ಕಡಿ, ಖಜಾಂಚಿ ವಿರುಪಾಕ್ಷಪ್ಪ ಕಡ್ಲಿ, ದ್ರಾಕ್ಷಾಯಣಮ್ಮ ಗಾಣಿಗೇರ, ಅನಸೂಯಮ್ಮ ಯರವಿನತಲಿ, ಅಜ್ಜನಗೌಡ ಗೌಡಪ್ಪಗೋಳ, ಅಕ್ಕಮಹಾದೇವಿ ಭರತನೂರಮಠ ಇದ್ದರು.