ಹಾವೇರಿ: ನಗರದ ಜೆ.ಎಚ್.ಪಟೇಲ ರಸ್ತೆಯಲ್ಲಿರುವ ದಾನಮ್ಮನ ಗುಡಿ ಮತ್ತು ಜಗಜ್ಯೋತಿ ಬಸವೇಶ್ವರ ಗುಡಿಯ ಎದುರಿಗೆ ಕಬರಸ್ತಾನದಲ್ಲಿ ನಗರಸಭೆ, ನಗರ ಅಭಿವೃದ್ಧಿ ಪ್ರಾಧಿಕಾರದ ಪರವಾನಗಿ ಪಡೆಯದೇ ಕಾನೂನುಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವುದರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಖಂಡನಾ ನಿರ್ಣಯ ತೆಗೆದುಕೊಂಡಿದೆ.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಮಹಾಸಭಾ ಖಂಡನಾ ನಿರ್ಣಯ ತೆಗೆದುಕೊಂಡಿದೆ. ನಗರಸಭೆಯವರು ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾಮಗಾರಿ ತಡೆಹಿಡಿದಿದ್ದು, ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಈಗಲಾದರೂ ಸರ್ಕಾರ ಮತ್ತು ನಗರಸಭೆ ಎಚ್ಚೆತ್ತುಕೊಂಡು ಕಟ್ಟಡ ನೆಲಸಮ ಮಾಡಬೇಕೆಂದು ಸಭೆ ಮೂಲಕ ಮಹಾಸಭಾ ಒತ್ತಾಯಿಸಿದೆ.
ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಮಾತನಾಡಿ, 1931ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಹಾವೇರಿ ಪುರಸಭೆ ಮುಸಲ್ಮಾನರ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿತ್ತು. ಈ ಭೂಮಿಯನ್ನು ಶವ ಸಂಸ್ಕಾರಕ್ಕೆ ಮಾತ್ರ ಉಪಯೋಗಿಸಬೇಕೇ ಹೊರತು ವಾಣಿಜ್ಯ ಮಳಿಗೆಗಳನ್ನು ಕಟ್ಟಲಿಕ್ಕೆ ಅಲ್ಲ. ಕಾನೂನು ಬಾಹಿರ ಕಟ್ಟಡಕ್ಕೆ ಶಾಸಕರು, ನಗರಸಭೆಯ ಎಲ್ಲ ಸದಸ್ಯರು ಯಾರೂ ಬೆಂಬಲ ನೀಡಬಾರದು ಎಂದರು.
ಮಹಾಸಭಾದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಹಾವೇರಿ, ಬಸವರಾಜ ಹಾದಿಮನಿ, ಅಜ್ಜನಗೌಡ ಗೌಡಪ್ಪನವರ, ಚಂದ್ರಶೇಖರ ಪಟ್ಟಣಶೆಟ್ಟಿ, ವಿರುಪಾಕ್ಷಪ್ಪ ಕಡ್ಲಿ, ರಾಜಕುಮಾರ ಮೆಣಸಿನಕಾಯಿ, ಸಿದ್ದಾರ್ಥ ಪಾಟೀಲ, ರವೀಂದ್ರ ಕುಡು ಒಕ್ಕಲಿಗ, ಗುರುಶಾಂತ ಯತ್ನಳ್ಳಿ, ರಾಜೇಶ ಗುಡಿ, ಮಾಲತೇಶ ವೀರಾಪುರ, ದಾಕ್ಷಾಯಿಣಿ ಗಾಣಿಗೇರ, ಅಮೃತಮ್ಮ ಶೀಲವಂತರ, ಅನಸೂಯಾ ಯರವಿನತಲಿ, ಲಲಿತಾ ಹಿರೇಮಠ, ಅನುಶಾ ಚಕ್ಕಡಿ, ಇತರರಿದ್ದರು.