

ಹಾವೇರಿ: ಕಾಯಕ, ದಾಸೋಹ ಹಾಗೂ ನಡೆ ನುಡಿ ಸಿದ್ದಾಂತದ ಮೂಲಕ ಹೊಸ ಸಮಾಜ ನಿರ್ಮಾಣ ಮಾಡಿದ ಬಸವಾದಿ ಶರಣರು ಸಮ ಸಮಾಜ ಕಟ್ಟುವುದರೊಂದಿಗೆ ಜನರ ಬದುಕಿಗೆ ಗೌರವದ ನೆಲೆಯನ್ನು ತಂದುಕೊಟ್ಟರು ಪ್ರತಿಯೊಬ್ಬರೂ ಆತ್ಮ ಗೌರವದಿಂದ ಬದುಕಲು ಕಲಿಸಿದರು ಎಂದು ಶಿಗ್ಗಾಂವಿ ಚನ್ನಪ್ಪ ಕುನ್ನೂರ ಕಾಲೇಜ್ ಪ್ರಾಚಾರ್ಯ ಡಾ.ನಾಗರಾಜ ಜಿ. ದ್ಯಾಮನಕೊಪ್ಪ ಹೇಳಿದರು.
ನಗರದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಹಾಗೂ ದಾರ್ಶನಿಕರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು ಬಸವಣ್ಣ. ಹಾಗಾಗಿ, ಇವತ್ತು ಬಸವಣ್ಣ ಪ್ರತಿಪಾದಿಸಿದ ತತ್ವಗಳು ಇಡಿ ಜಗತ್ತಿಗೆ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್ ಕೋರಿಶೆಟ್ಟರ ಮಾತನಾಡಿ, ಬಸವ ಜಯಂತಿ ಕೇವಲ ಆಚರಣೆಯಾಗಿ ಉಳಿಯಬಾರದು. ಅವರ ತತ್ವ ಸಿದ್ಧಾಂತ, ಸಾಮಾಜಿಕ ಕಳಕಳಿಯನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುಂದೆ ಸಾಗಬೇಕು. ಕೇವಲ ಭಾಷಣದಿಂದ ಸುಧಾರಣೆ ಆಗದು. ಕೃತಿಯಲ್ಲಿ ಬರಬೇಕು. ಆಗ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದರು.
ರೇಣುಕಾಚಾರ್ಯರ ಕುರಿತು ಸಹ ಪ್ರಾದ್ಯಾಪಕ ಎಂ.ಸಿ ಮಠದ ಹಾಗೂ ಶರಣರ ಶರಣೆಯರ ಕುರಿತು ಜಗದೀಶ ಹತ್ತಿಕೋಟೆ ಉಪನ್ಯಾಸ ನೀಡಿದರು. ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್ ಮಾಳಗಿ ಮಾತನಾಡಿದರು. ಹಾವೇರಿ ಹಾಲು ಒಕ್ಕೂಟದ ನಿರ್ದೇಶಕರಾದ ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ವಚನ, ರಂಗೋಲಿ ಮತ್ತು ಸ್ವರಚಿತ ಕವನ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಿಯದರ್ಶಿನಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಅನುಸೂಯ ಯರವಿನತಲಿ, ಶಂಕರಗೌಡ ಪಾಟೀಲ, ಸಂದೀಪ ಚಿನ್ನಿಕಟ್ಟಿ, ಶಂಭುಲಿಂಗಪ್ಪ ಚಕ್ಕಡಿ, ಷಣ್ಮುಖಪ್ಪ ಉಳ್ಳಾಗಡ್ಡಿ, ಮೃತ್ಯುಂಜಯ ಬುಕ್ಕಶೆಟ್ಟಿ, ಕಮಲಾ ಬುಕ್ಕಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾವೇರಿ ಸ್ವಾಗತಿಸಿದರು. ಪ್ರಭು ಮರಗೂರು ವಂದಿಸಿದರು, ಮಳಿಮಠ ನಿರೂಪಿಸಿದರು.