

ಹಾವೇರಿ: ನಾಡು ಕಂಡ ಮೇರು ವ್ಯಕ್ತಿತ್ವದ ಮಹೋನ್ನತ ನಟ ಡಾ.ರಾಜಕುಮಾರ್ ಚಲನಚಿತ್ರಗಳು ಹಾಗೂ ಚಳವಳಿಗಳ ಮೂಲಕ ಕನ್ನಡದ ಭಾಷೆ, ಕನ್ನಡಿಗರ ಸ್ವಾಭಿಮಾನ, ಸಂಸ್ಕೃತಿ, ಪರಂಪರೆಗಳ ಮೌಲ್ಯಗಳನ್ನು ಎತ್ತಿಹಿಡಿದವರು. ಕನ್ನಡದ ಸೊಗಡನ್ನು ಎಲ್ಲೆಡೆ ಪಸರಿಸಿದವರು ಎಂದು ಜಾನಪದ ತಜ್ಞ ಕೆ.ಸಿ ನಾಗರಜ್ಜಿ ಅಭಿಪ್ರಾಯಪಟ್ಟರು.
ನಗರದ ವಾರ್ತಾ ಭವನದಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಟಸಾರ್ವಭೌಮ ಡಾ.ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ರಾಜಕುಮಾರ್ ಅವರಿಗೆ ಡಾಕ್ಟರೇಟ್, ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ಅವರು ಕೇವಲ ನಟರಾಗಿ ಉಳಿಯದೇ ಗಾಯಕರಾಗಿ, ಕನ್ನಡ ನಾಡು-ನುಡಿಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ರಂಗಭೂಮಿ, ಚಲನಚಿತ್ರ, ಗಾಯನದಲ್ಲಿ ಅತ್ಯುತ್ತಮವಾದ ಪ್ರತಿಭೆ ಹೊಂದಿದ ಡಾ.ರಾಜಕುಮಾರ್ ಅಭಿನಯಿಸಿದ ಚಲನಚಿತ್ರಗಳು, ಸಾಮಾಜಿಕವಾಗಿ ಉತ್ತಮ ಸಂದೇಶ ನೀಡಿವೆ. ಡಾ.ರಾಜ್ ನಟಿಸಿ ಆಧ್ಯಾತ್ಮಿಕ, ಪೌರಾಣಿಕ ಪಾತ್ರಗಳು ಇಂದಿಗೂ ಜನಮಾನಸದಲ್ಲಿ ಬೇರೂರಿವೆ. ಬೇಡರ ಕಣ್ಣಪ್ಪ ಪಾತ್ರ ಜನರ ಮೇಲೆ ಪ್ರಭಾವ ಬೀರಿದ ಅಪರೂಪದ ನಟನೆ ಡಾ.ರಾಜಕುಮಾರ್ ಅವರದು. ಬಂಗಾರದ ಮನುಷ್ಯನಂತಹ ಸಿನಿಮಾಗಳು ಸಾಮಾಜಿಕ ಮೌಲ್ಯದಿಂದ ಕೂಡಿದ್ದು, ಶ್ರಮದ ಬದುಕು, ಸ್ವಾಭಿಮಾನದ ಬದುಕಿಗೆ ಯುವಜನರಿಗೆ ಇಂದಿಗೂ ಪ್ರೇರಣೆಯಾದ ಪಾತ್ರ ಇದಾಗಿದೆ. ಇಂತಹ ಹಲವು ಚಿತ್ರಗಳ ಅಭಿನಯ, ಅವರ ಚಿತ್ರಗಳ ಸಂದೇಶ ಸಾಮಾಜಿಕವಾಗಿ ಉತ್ತಮ ಅಭಿರುಚಿ ಬೆಳೆಸಿವೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ ಚಿನ್ನಿಕಟ್ಟಿ ಮಾತನಾಡಿ, ಅತ್ಯಂತ ಸರಳ-ಸಜ್ಜನಿಕೆ ಹಾಗೂ ಮಾನವೀಯ ನಡೆಯ ಡಾ.ರಾಜಕುಮಾರ್ ತಮ್ಮ ಅದ್ಭುತ ವ್ಯಕ್ತಿತ್ವ ಮತ್ತು ಅಭಿಯನದ ಮೂಲಕ ಅಸಾಧಾರಣವಾಗಿ ಬೆಳೆದರು. ಸಹ ಕಲಾವಿದರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರು ಕನ್ನಡಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟರು. ಇಂದಿಗೂ ಅವರ ಹೆಸರು ಅಜರಾಮರವಾಗಿದೆ. ಅನೇಕ ರಸ್ತೆ ಉದ್ಯಾನವನಗಳಿಗೆ ಅವರ ಹೆಸರು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಲಾವಿದ ರಾಜು ಸುವೇ ಅವರು ಡಾ.ರಾಜಕುಮಾರ್ ಅವರ ‘ಗಂಧದಗುಡಿ’ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ, ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು’ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ಇತರರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆ ಎಫ್‌ಡಿಸಿ ರಾಘವೇಂದ್ರ ಕುರಣೆ ನಿರೂಪಿಸಿದರು. ದೇವಕಿ ಎಸ್.ಉಂದ್ರಿ ವಂದಿಸಿದರು.