ಹಾವೇರಿ: ಬ್ಯಾಡಗಿ ತಾಲೂಕು ಮಲ್ಲೂರ, ಬುಡಪನಹಳ್ಳಿ, ಘಾಳಪೂಜಿ, ಹಿರೇಕೆರೂರು ತಾಲೂಕು ನಿಡನೇಗಿಲ, ರಟ್ಟಿಹಳ್ಳಿ ತಾಲೂಕು ಚಿಕ್ಕಯಡಚಿ, ಸವಣೂರ ತಾಲೂಕು ಚಿಲ್ಲೂರಬಡ್ನಿ, ಶಿಗ್ಗಾಂವಿ ತಾಲೂಕು ಹೊಸೂರ, ಹಾನಗಲ್ಲ ತಾಲೂಕು ಸಾವಸಗಿ ಮತ್ತು ಮಾರನಬೀಡ ಗ್ರಾಮ ಪಂಚಾಯಿತಿಯ ತಲಾ ಒಂದು ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆಯಲಿದೆ.
ಉಪ ಚುಣಾವಣೆ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಅಂದರೆ ನ.21ರ ಸಂಜೆ 5 ಗಂಟೆಯಿಂದ ನ.23ರ ಸಂಜೆ 5ರವರೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿ.ಎನ್.ಎಸ್.ಎಸ್.2023ರ ಕಲಂ 163ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಉಪ ಚುನಾವಣೆ ಜರುಗುವ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಮತಗಟ್ಟೆಗಳ ಸುತ್ತ 100 ಮೀಟರ್ ಅಂತರದಲ್ಲಿ ಪ್ರಚಾರದ ಸಲುವಾಗಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದ್ದು, ಅದರಲ್ಲಿ ಐದು ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ.
ಸಂತೆ ಮುಂದೂಡಿ ಆದೇಶ :
ಗ್ರಾಪಂ ಉಪ ಚುನಾವಣೆ ಮತದಾನ ನ.23ರಂದು ಜರುಗಲಿದ್ದು, ಈ ಗ್ರಾಮಗಳ ವ್ಯಾಪ್ತಿಯಲ್ಲಿ ಅಂದು ನಡೆಯುವ ಸಂತೆಗಳನ್ನು ಮುಂದೂಡಿ ಡಿಸಿ ಆದೇಶಿಸಿದ್ದಾರೆ. ಬ್ಯಾಡಗಿ ತಾಲೂಕು ಮಲ್ಲೂರ, ಬುಡಪನಹಳ್ಳಿ, ದುಮ್ಮಿಹಾಳ, ಹಿರೇಕೆರೂರ ತಾಲೂಕು ನೀಡನೇಗಿಲ, ರಟ್ಟಿಹಳ್ಳಿ ತಾಲೂಕು ಚಿಕ್ಕಯಡಚಿ, ಸವಣೂರ ತಾಲೂಕು ಚಿಲ್ಲೂರಬಡ್ನಿ, ಶಿಗ್ಗಾಂವಿ ತಾಲೂಕು ಹೊಸೂರ, ಹಾನಗಲ್ಲ ತಾಲೂಕು ಕಾಡಶೆಟ್ಟಿಹಳ್ಳಿ ಹಾಗೂ ಕಾಲ್ವೆಕಲ್ಲಾಪೂರ ಗ್ರಾಮಗಳಲ್ಲಿ ನ.23ರಂದು ನಡೆಯುವ ಸಂತೆಯನ್ನು ಮುಂದೂಡಲಾಗಿದೆ.
ಮದ್ಯ ಮಾರಾಟ ನಿಷೇಧ :
ಮತದಾನ ನಡೆಯಲಿರುವ ಗ್ರಾಪಂಗಳಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.