

ಹಾವೇರಿ: ವರ ಮಹಾಲಕ್ಷ್ಮೀ ಹಬ್ಬ ಹಾಗೂ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕೇಂದ್ರ ಹಾವೇರಿ ನಗರ, ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣ, ಹೋಬಳಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಶುಕ್ರವಾರ ವರ ಮಹಾಲಕ್ಷ್ಮೀ ಹಬ್ಬ ಹಾಗೂ ಶನಿವಾರ ರಕ್ಷಾ ಬಂಧನ ಹಿನ್ನೆಲೆ ಮಹಿಳೆಯರು, ಯುವತಿಯರು ವರ ಮಹಾಲಕ್ಷ್ಮೀ ಪೂಜೆ ಹಾಗೂ ಸಹೋದರರಿಗೆ ರಕ್ಷೆ ಕಟ್ಟಲು ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
ಪೂಜೆಗೆ ಅಗತ್ಯವಾದ ಹೂವು, ಹಣ್ಣು, ಕಿರಾಣಿ, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನ ಗುರುವಾರ ಮಾರುಕಟ್ಟೆಗಳಿಗೆ ಆಗಮಿಸಿದ್ದರು. ಹೀಗಾಗಿ ವ್ಯಾಪಾರ ಜೋರಾಗಿತ್ತು. ಹಬ್ಬದ ಹಿನ್ನೆಲೆ ಕೆಲ ವಸ್ತುಗಳು ಸ್ವಲ್ಪ ದುಬಾರಿಯಾಗಿದ್ದವು. ಆದರೂ ಅಗತ್ಯವಿರುವ ವಸ್ತುಗಳ ಖರೀದಿಸಿದ್ದು ಕಂಡು ಬಂತು.