ಎಸ್‌ಟಿ ಮೀಸಲಾತಿಗೆ ಅನ್ಯ ಸಮಾಜ ಸೇರ್ಪಡೆ ಬೇಡ; ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಆಗ್ರಹ

27 HVR 7
Published on

ಹಾವೇರಿ: ರಾಜ್ಯದ ಅನ್ಯ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರ್ಪಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಘಟಕ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಇಲ್ಲಿನ ಜಿಲ್ಲಾಡಳಿತ ಭವನದ ಬಳಿ ಗುರುವಾರ ಪ್ರತಿಭಟಿಸಿ, ಡಿಸಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.

ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸದೃಢವಾಗಿ ಮುಂದುವರೆದಿರುವ ಅನ್ಯ ಸಮಾಜವನ್ನು ಸೇರ್ಪಡೆ ಮಾಡಲು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು. ಸಂವಿಧಾನದ ಆಶಯದಂತೆ ಹಾಲಿ ಇರುವ ಪರಿಶಿಷ್ಟ ಪಂಗಡದ ಪಟ್ಟಿಯರುವ ಜಾತಿಯ ಸಮಾಜದವರಿಗೆ ವಿವಿಧ ರೀತಿಯ ಸೌಲಭ್ಯಗಳು ಸಿಗುವಲ್ಲಿ ಅನ್ಯಾಯವಾಗುತ್ತಿದೆ. ಸಂವಿಧಾನದ ಹಿತ ಕಾಪಾಡುವ ಪ್ರಭುದ್ಧತೆಯನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಗೌರವ ಪೂರ್ವಕವಾಗಿ ಈ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ವಾಲ್ಮೀಕಿ ಸಮಾಜದ ಶಾಸಕರಾದ ನಾಗೇಂದ್ರ, ಕೆ.ಎನ್.ರಾಜಣ್ಣ ಇವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಈ ಮೂಲಕ ವಾಲ್ಮೀಕಿ ಸಮಾಜ ತುಳಿಯುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ ಒಂದರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ತೆಗೆದುಕೊಂಡು ವಂಚಿಸುತ್ತಿದ್ದಾರೆ. ರಾಜ್ಯದಲ್ಲಿ ಎಸ್‌ಟಿ ಸಮಾಜಕ್ಕೆ ಸೇರದೇ ಇರುವ ಅನ್ಯ ಜಾತಿಯವರು ನಕಲಿ ಎಸ್‌ಟಿ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವ ಹಾಗೂ ಎಸ್‌ಟಿ ಪ್ರಮಾಣ ಪತ್ರವನ್ನು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ಬಡಮ್ಮನವರ, ತಾಲೂಕು ಅಧ್ಯಕ್ಷ ಮಾಲತೇಶ ರಿತ್ತಿ, ಪ್ರಮುಖರಾದ ಮಲ್ಲಿಕಾರ್ಜುನ ಬುದಗಟ್ಟಿ, ರಾಘವೇಂದ್ರ ಬಾಸೂರ, ನೀಲಪ್ಪ ಕನಕಪುರ, ಜಗದೀಶ ಕೊಂಡೆಮ್ಮನವರ, ಕುಮಾರ ಅಗಸನಮಟ್ಟಿ, ಮಾರುತಿ ಕನವಳ್ಳಿ, ಗೀತಾ ಆರ್., ಬಾಲರಾಜ ಹೊನ್ನನಾಯಕ, ಶ್ರೀಕಾಂತ ತಳವಾರ, ಚಂದ್ರಪ್ಪ ಕರೆಬಸಪ್ಪನವರ, ಶಿವನಗೌಡ ಪಾಟೀಲ, ಉದಯಕುಮಾರ ಅಗಸನಮಟ್ಟಿ, ಚಂದ್ರಶೇಖರ ಕದರಮಂಡಲಗಿ, ರಮೇಶ ಯಂಕಣ್ಣನವರ, ನಾಗರಾಜ ಬಾಳೆಹೊಸೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net