ಗೊಬ್ಬರ ಕೃತಕ ಅಭಾವ ಸೃಷ್ಟಿದರೆ ಪರವಾನಗಿ ರದ್ದು; ಜಿಲ್ಲೆಯಲ್ಲಿದೆ 36,620 ಟನ್ ರಸಗೊಬ್ಬರ; ಜಂಟಿ ಕೃಷಿ ನಿರ್ದೇಶಕ ಮಂಜುನಾಥ

10 HVR 2 A
Published on

ಹಾವೇರಿ: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಬಿತ್ತನೆಗೆ ಅವಶ್ಯವಿರುವ ಯೂರಿಯಾ ರಸಗೊಬ್ಬರ ಸರಬರಾಜು ಮಾಡಲಾಗುತ್ತಿದೆ. ರಸಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ದರದಲ್ಲಿ ಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಂಡು, ಮಾರಾಟ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಮುಂಗಾರಿನ ಜುಲೈ ಅಂತ್ಯದವರೆಗೆ 32,627 ಟನ್ ಯೂರಿಯಾ ರಸಗೊಬ್ಬರ ಸರಬರಾಜು ಆಗಬೇಕಿಗಿದ್ದು, ಈವರೆಗೆ 38,113 ಟನ್ ಸರಬರಾಜಾಗಿದೆ. ಹಳೆಯ ದಾಸ್ತಾನು ಸೇರಿ 51,368 ಟನ್ ರಸಗೊಬ್ಬರದ ಪೈಕಿ 36,620 ಟನ್ ವಿತರಣೆಯಾಗಿದೆ. 14,748 ಟನ್ ಉಳಿಕೆ ದಾಸ್ತಾನು ವಿತರಣೆಗೆ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ದರಪಟ್ಟಿಯನ್ನು ಮಾರಾಟ ಮಳಿಗೆಯಲ್ಲಿ ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟಮಾಡುವುದು, ಬಿಲ್ ಇಡದೇ ಇರುವುದು ಅಥವಾ ಇತರೆ ಉತ್ಪನ್ನಗಳನ್ನು ಲಿಂಕ್ ಮಾಡುವುದು, ಅಕ್ರಮವಾಗಿ ಸಂಗ್ರಹಿಸಿಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಳೆ ರಕ್ಷಣೆ ಕ್ರಮಗಳು: ಸತತ ಮಳೆಯಿಂದ ರೈತರ ಜಮೀನಿನಲ್ಲಿ ನೀರುನಿಂತು ಹೆಚ್ಚಿನ ತೇವಾಂಶದಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿ ಕೆಂಪು, ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಆದ್ದರಿಂದ ರೈತರು ಜಮೀನಿನಲ್ಲಿ ನೀರು ಬಸಿಯುವ ವ್ಯವಸ್ಥೆ ಮಾಡಬೇಕು. ಗೋವಿನಜೋಳದಲ್ಲಿ ಎಲೆ ಹಳದಿಯಾಗಿ ಕಂಡುಬಂದಲ್ಲಿ 19:19:19 ಅಥವಾ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂನಂತೆ ಕರಗಿಸಿ ಸಿಂಪಡಿಸಬೇಕು.
ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ.0.5ರ 19:19:19 ಅಥವಾ 13:0:45 (5 ಗ್ರಾಂ ಪ್ರತಿ ಲೀ. ನೀರಿಗೆ) ಮತ್ತು ಶೇ.0.25ರ ಸತುವಿನ ಸಲ್ಪೇಟ್ ದ್ರಾವಣವನ್ನು (2.5 ಗ್ರಾಂ ಪ್ರತಿ ಲೀ. ನೀರಿಗೆ) ಹಾಕಿ ಎರಡು ಸಲ ಅಂದರೆ 15 ದಿವಸದ ಅಂತರದಲ್ಲಿ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ 5 ಗ್ರಾಂ ಸಿಂಪರಣೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಹತ್ತಿ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಪೂರೈಸಲು 19:19:19 ಅಥವಾ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿಲೀಟರ್ ನೀರಿಗೆ 5 ಗ್ರಾಂನಂತೆ 30-35 ದಿನದ ಬೆಳೆಗೆ, 10 ಗ್ರಾಂನಂತೆ 45-60 ದಿನದ ಬೆಳೆಗೆ ಸಿಂರಪಣೆ ಕೈಗೊಳ್ಳಬೇಕು. ಸೋಯಾ, ಅವರೆ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಪೂರೈಸಲು ಶೇ.1.0ರ 13:0:45 ಅಥವಾ ಯೂರಿಯಾ ಸಿಂಪರಣೆ ಮಾಡಬೇಕು ಎಂದು ಜೆಡಿ ಸಲಹೆ ನೀಡಿದ್ದಾರೆ.
ನ್ಯಾನೋ ಯೂರಿಯಾ ಹೆಚ್ಚು ಬಳಸಿ
ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ರೈತರು ಕೇವಲ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸದೇ ಇತರೆ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಸಲು ವಿನಂತಿಸಲಾಗಿದೆ. ಬೆಳೆಗಳಲ್ಲಿ ಹೆಚ್ಚು ಯೂರಿಯಾ ಬಳಸಿದಲ್ಲಿ ಬೆಳೆಯು ಹೆಚ್ಚು ರಸವತ್ತಾಗಿ, ಮೆತ್ತಗಾಗಿ ಕೀಟ ಮತ್ತು ರೋಗದ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ. ಅದಲ್ಲದೆ ಬೆಳೆಯಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬರುತ್ತದೆ. ಆದ್ದರಿಂದ ಎಲ್ಲ ರೈತರು ಯೂರಿಯಾವನ್ನು ಅವಶ್ಯಕತೆಗೆ ತಕ್ಕಂತೆ ಬಳಸಲು ವಿನಂತಿಸಿದೆ. ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸಬಹುದಾಗಿದೆ ಎಂದು ಮಂಜುನಾಥ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net