ಹಾವೇರಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಫೆ.12ರಿಂದ 14ರವರೆಗೆ ಮೂರು ದಿನ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿ ವರ್ಗ ಅಲರ್ಟ್ ಆಗಿದ್ದು, ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ.
ಮೂರು ದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವ ಉಪ ಲೋಕಾಯುಕ್ತರಿಗೆ ತಮ್ಮ ಹುಳುಕುಗಳು ಯಾವುದೂ ಕಾಣಬಾರದೆಂದು ಜಿಲ್ಲಾಸ್ಪತ್ರೆ, ನಗರಸಭೆ ಸೇರಿ ಹಲವು ಅಧಿಕಾರಿಗಳು ತಮ್ಮ ಕಚೇರಿಗೆ ಸುಣ್ಣ, ಬಣ್ಣ ಬಳಿಸಿ, ಫಲಫಲ ಹೊಳೆಯುವಂತೆ ಮಾಡಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಸರ್ಕಾರಿ ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಧಿಕಾರಿಗಳು ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದ್ದಾರೆ. ರಜೆ ಹಾಕದಂತೆಯೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹಾವೇರಿ ನಗರಸಭೆ ಅಧಿಕಾರಿಗಳಂತೂ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಂತಾಗಿದೆ. ಸ್ವಚ್ಛತೆಯೇ ನಮ್ಮ ಮೊದಲ ಕರ್ತವ್ಯ ಎಂದು ಹಗಲು- ರಾತ್ರಿ ಎನ್ನದೇ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸಂದಿ-ಗೊಂದಿ ಎನ್ನದೇ ಎಲ್ಲೆಡೆ ಸಂಚರಿಸಿ ಪೌರ ಕಾರ್ಮಿಕರನ್ನು ಕರೆದೊಯ್ದು ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ಉಪ ಲೋಕಾಯುಕ್ತರ ಆಗಮನದ ಹಿನ್ನೆಲೆಯಲ್ಲಿ ಇಷ್ಟೆಲ್ಲ ತಯಾರಿ ನಡೆದಿದ್ದು, ಒಂದು ವಾರದ ನಂತರ ಮತ್ತದೇ ಗತಿ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಚಾಟ್ಸ್ ಸೆಂಟರ್ ಎತ್ತಂಗಡಿ
ಹಾವೇರಿ ನಗರದ ಗುರುಭವನದ ಬಳಿ ಪ್ರತಿದಿನ 30ಕ್ಕೂ ಅಧಿಕ ಚಾಟ್ ಸೆಂಟರ್‌ಗಳು ತೆರೆದಿರುತ್ತವೆ. ಮನೆಬಳಕೆ ಸಿಲಿಂಡರ್ ಬಳಸಿಕೊಂಡು ಚಾಟ್ಸ್ ಸೆಂಟರ್ ನಡೆಸುತ್ತಾರೆ. ಗುಭವನ ಸಮೀಪದಲ್ಲೇ ಇತ್ತಿಚೆಗೆ ಮಾಲ್ ಆರಂಭವಾಗಿದ್ದು, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲ. ಈ ಎಲ್ಲ ಕಾರಣದಿಂದ ನಿತ್ಯವೂ ಇಲ್ಲಿ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಕಿರಿಕಿರಿ ಉಂಟಾಗುತ್ತದೆ. ಇದೀಗ ಉಪ ಲೋಕಾಯುಕ್ತರ ಆಗಮನದ ಹಿನ್ನೆಲೆಯಲ್ಲಿ ನಗರಸಭೆಯವರು ಚಾಟ್ ಸೆಂಟರ್‌ಗಳನ್ನು ಎತ್ತಂಗಡಿ ಮಾಡಿಸಿ, ಸ್ವಚ್ಛಗೊಳಿಸಿದ್ದಾರೆ. ಸ್ವಲ್ಪ ದಿನದ ನಂತರ ಮತ್ತದೇ ಸಮಸ್ಯೆ ಮಾಡುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಾರ್ವಜನಿಕರಿಂದ ದೂರು ಸ್ವೀಕಾರ ನಾಳೆ
ಉಪ ಲೋಕಾಯುಕ್ತರ ನೇತೃತ್ವದಲ್ಲಿ ನಗರದ ಜಿಲ್ಲಾ ಗುರು ಭವನದಲ್ಲಿ ಫೆ.13ರಂದು ಬೆಳಗ್ಗೆ 10ರಿಂದ ಮದ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ ವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಯಲಿದೆ.
ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಂದ ತಮಗೆ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿ ಮತ್ತು ನೌಕರರು ನ್ಯಾಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ಕಾರಣವಿಲ್ಲದೆ ತೊಂದರೆ ಕೊಡುವುದು, ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ತಿಳಿಸಿದ್ದಾರೆ.
ವಿವಿಧೆಡೆ ಭೇಟಿ
ಫೆ.12ರಂದು ಜಿಲ್ಲೆಗೆ ಭೇಟಿ ನೀಡಲಿರುವ ಉಪ ಲೋಕಾಯುಕ್ತರು 12ರಂದು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಫೆ.13ರಂದು ಗುರುಭವನದಲ್ಲಿ ಸಾರ್ವಜನಿಕರ ದೂರು ಸ್ವೀಕಾರ ಸಭೆ ನಡೆಸಲಿದ್ದಾರೆ. ಫೆ.14ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಉಪ ಲೋಕಾಯುಕ್ತ ವ್ಯಾಪ್ತಿಯ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಪ್ರಕರಣಗಳ ವಿಲೇವಾರಿ ಸಭೆ ನಡೆಸಲಿದ್ದಾರೆ. ಸಂಜೆ 5.45ಕ್ಕೆ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರದ ಕುರಿತು ಹಾವೇರಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು ಮತ್ತು ನೌಕರರಿಗೆ ಉಪನ್ಯಾಸ ಜರುಗಲಿದೆ.