

ಹಾವೇರಿ: ರೈತರು ದೇಶದ ಬೆನ್ನೆಲುಬು. ಅವರಿಂದ ಆದಾಯ ತೆಗೆದುಕೊಳ್ಳುವ ನೀವು ಅವರಿಗೆ ಕನಿಷ್ಠ ಮೂಲ ಸೌಲಕರ್ಯವನ್ನೂ ಕೊಡದಿದ್ದರೆ ಹೇಗೆ ? ತೂಕದಲ್ಲಿ ಮೋಸ, ರೈತರಿಗೆ ಕನಿಷ್ಠ ಕುಡಿಯಲು ನೀರು, ಶೌಚಗೃಹವನ್ನೂ ನೀಡದೇ ಏನ್ ಮಾಡ್ತಿದೀರಿ ? ಕನಿಷ್ಠ ಮೂಲಸೌಲಭ್ಯ ಇಲ್ಲ ಅಂದರೆ ನೀವು ಇರೋದ್ಯಾಕೆ ? ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅಧಿಕಾರಿಗಳ ಬೆವರಿಳಿಸಿದರು.
ಮೂರು ದಿನಗಳ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ಬಿ.ವೀರಪ್ಪ ಬುಧವಾರ ಬೆಳಗ್ಗೆ ನಗರದ ಹಾನಗಲ್ಲ ರಸ್ತೆಯ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಏಕಾಏಕಿ ಭೇಟಿ ನೀಡಿ, ಪರಿಶೀಲಿಸಿದರು. ಅಲ್ಲಿದ್ದ ರೈತರು, ಮಹಿಳೆಯರು, ಏಜೆಂಟರು, ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಸಮಸ್ಯೆಗಳ ಬಗೆಗೆ ತಿಳಿದುಕೊಂಡರು. ಮಾರುಕಟ್ಟೆಯಲ್ಲಿನ ದುರವಸ್ಥೆ ಕಂಡು ಎಪಿಎಂಸಿ ಕಾರ್ಯದರ್ಶಿ ಗೋವಿಂದ ಕಬ್ಬೇರಳ್ಳಿ ವಿರುದ್ಧ ಕಿಡಿಕಾರಿದರು.
ದಿನಕ್ಕೆ ಎಷ್ಟು ದುಡಿಯುತ್ತೀರಿ ? ಕಮಿಷನ್ ಎಷ್ಟು ಕೊಡುತ್ತೀರಿ ? ಎಪಿಎಂಸಿಗೆ ಕೊಡ್ತೀರಾ ಅಥವಾ ಏಜೆಂಟರಿಗಾ ? ಎಂದು ಪ್ರಶ್ನಿಸಿದರು. ಈ ವೇಳೆ ಕೆಲವರು ಶೇ.2, 4, 8, 10ರಷ್ಟು ಎಂದು ತಡವರಿಸಿದರು. ಇದೇ ವೇಳೆ ಅಲ್ಲಿದ್ದ ಕೆಲವರು, ‘ಸಾರ್ ಇಲ್ಲಿ ಪ್ರತಿದಿನ ಕಸ ಹೊಡಿಯಾಕ್ ಹೇಳ್ರಿ, ಇಲ್ಲಿ ಶೌಚಗೃಹ ಇಲ್ಲ. ನಿಮ್ಮ ಮುಂದ ನಾಟಕ ಮಾಡಕತ್ತಾರ. ಟಾಯ್ಲೆಟ್ ಎಲ್ಲಿ ಅದಾವ ತೋರಿಸಾಕ ಹೇಳರಿ’ ಎಂದು ದೂರಿದರು. ಆಗ ಎಲ್ಲಿದಾವೆ ಎಂದಾಗ ತಡವರಿಸಿದ ಎಪಿಎಂಸಿ ಕಾರ್ಯದರ್ಶಿ ಕಬ್ಬೇರಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಲೋಕಾಯುಕ್ತ ಹೆಚ್ಚುವರಿ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ, ಅರವಿಂದ ಎನ್.ವಿ., ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲೆಯ ನ್ಯಾಯಾಧೀಶರು, ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ, ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು.