

ಹಾವೇರಿ: ನೂತನ ಹಾವೇರಿ ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಿದ್ದು, ಸರ್ಕಾರ, ಸಾರ್ವಜನಿಕರ ಸಹಕಾರದೊಂದಿಗೆ ಕೆಲವೇ ದಿನಗಳಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ವಿದ್ಯಾರ್ಥಿ ಸ್ನೇಹಿ ವಿವಿಯಾಗಿ ಬೆಳವಣಿಗೆ ಹೊಂದಲಿದೆ. ಯುವ ಜನತೆಗೆ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವ ಮಟ್ಟದಲ್ಲಿ ಮಾದರಿ ವಿವಿಯಾಗಿ ಅಭಿವೃದ್ಧಿಪಡಿಸುವ ಆಶಯ ಹೊಂದಲಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.
ತಾಲೂಕಿನ ಕೆರಿಮತ್ತಿಹಳ್ಳಿಯ ನೂತನ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿವಿಯಲ್ಲಿರುವ ಎಲ್ಲ ಕೋರ್ಸ್‌ಗಳಿಗೂ ಪ್ರವೇಶಾವಕಾಶ ನೀಡಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಕೌಶಲಾಧಾರಿತ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಡಿಜಿಟಲ್ ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಂಡು ಯಾವುದೇ ವಿಳಂಬವಿಲ್ಲದೆ ಶೀಘ್ರಗತಿಯಲ್ಲಿ ಪದವಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದೆ ಎಂದರು.
ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಸಂಯೋಜಿತ ಪದವಿ ಮಹಾವಿದ್ಯಾಲಯಗಳ ಬೋಧಕ, ಸಿಬ್ಬಂದಿಗೆ ಅಭಿವೃದ್ಧಿ ಪೂರಕ ತರಬೇತಿ ಆಯೋಜಿಸುವ ಮೂಲಕ ಅವರ ಬೋಧನಾ ಸಾಮರ್ಥ್ಯ ಮತ್ತು ಕೌಶಲ ಅಭಿವೃದ್ಧಿಪಡಿಸಲಾಗುವುದು. ಎಲ್ಲ ಕೋರ್ಸಿನ ಪ್ರತಿಬೋಧಕ ಸಿಬ್ಬಂದಿಗೂ ಅಕಾಡೆಮಿಕ್ ಪರ್ಫಾರ್ಮೆನ್ಸ್ ಇಂಡಿಕೇಟರ್ಸ್ ಸ್ಕೋರ್ ಪದ್ಧತಿ ಅನುಸರಿಸಿ ವಾರ್ಷಿಕ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲು ಯೋಜಿಸಲಾಗಿದೆ. ವಿದ್ಯುತ್ ಸಮಸ್ಯೆ ನೀಗಿಸಲು ಸೋಲಾರ್ ರೂಫ್ ಟಾಪ್ ಅಳವಡಿಸುವ ಚಿಂತನೆ ನಡೆಸಲಾಗಿದೆ. ಸಾರಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕ್ಯಾಂಪಸ್‌ನಲ್ಲಿ ಕ್ಯಾಂಟೀನ್, ಕಂಪ್ಯೂಟರ್ ಸೆಂಟರ್ ಇತ್ಯಾದಿ ಸೌಲಭ್ಯ ಒದಗಿಸುವ ಕೆಲಸ ನಡೆದಿದೆ ಎಂದರು.
2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿಯನ್ನು ಹಾವೇರಿ ವಿಶ್ವವಿದ್ಯಾಲಯದಡಿ ನೀಡಲಾಗುತ್ತದೆ. ಹಾವೇರಿ ವಿವಿ ವ್ಯಾಪ್ತಿಯ 40 ಪದವಿ ಕಾಲೇಜುಗಳ ಪ್ರಾಚಾರ್ಯರರಿಗೆ ಈ ಕುರಿತು ಈಗಾಗಲೇ ಸೂಚಿಸಲಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಹಾವೇರಿ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯು.ಯು.ಸಿ.ಎಂ.ಎಸ್) ಕೋಡ್ ನೀಡಿದ್ದು, ಹಾವೇರಿ ವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಾಚಾರ್ಯರಿಗೆ ಹಾಗೂ ಆಡಳಿತ ಮಂಡಳಿಗೆ ಹಾವೇರಿ ವಿಶ್ವವಿದ್ಯಾಲಯದ ಸಂಯೋಜನೆ ಪಡೆಯಲು ಈಗಾಗಲೇ ತಿಳಿಸಲಾಗಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ಹಾವೇರಿ ವಿವಿ ಆಡಳಿತ ವಿಭಾಗದ ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟಿ, ಮೌಲ್ಯ ಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಪ್ರಶಾಂತ ಎಚ್.ವೈ. ಉಪಸ್ಥಿತರಿದ್ದರು.
ವಿವಿಯಲ್ಲಿ ಪ್ರಸ್ತುತ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಡಬ್ಲುೃ, ಬಿಎಸ್‌ಸಿ, ಬಿಎಡ್, ಬಿಪಿಎಡ್ ವಿಷಯಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ಲಭ್ಯವಿವೆ. ಮುಂದಿನ ದಿನಗಳಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್, ಫುಡ್ ಟೆಕ್ನಾಲಜಿ, ಸೈಬರ್ ಸೆಕ್ಯುರಿಟಿ, ಇಂಟಿರಿಯರ್ ಡೆಕೋರೇಶನ್, ಟ್ರಾವೆಲ್ ಆ್ಯಂಡ್ ಟೂರಿಸಂ, ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್, ಐಟಿ ರಿಲೇಟೆಡ್ ಕೋರ್ಸ್, ಫ್ಯಾಷನ್ ಡಿಸೈನಿಂಗ್, ಮಿಲಿಟರಿ ಸೈನ್ಸ್, ಎನರ್ಜಿ ಸೈನ್ಸ್, ಸೇರಿದಂತೆ ಉದ್ಯೋಗ ದೊರಕಿಸಬಲ್ಲ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಕೋರ್ಸ್‌ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಡಾ.ಜಂಗಮಶೆಟ್ಟಿ ವಿವರಿಸಿದರು.