

ಹಾವೇರಿ: ದೇಶಕ್ಕೆ ಕೊಡುಗೆ ನೀಡಿದ ಮಹನೀಯರ ಕೊಡುಗೆ ಸದಾ ಸ್ಮರಣೀಯವಾದದ್ದು, ಅದಕ್ಕಾಗಿ ಅವರ ಸ್ಮರಣೆಗಾಗಿ ಅವರ ಹೆಸರಲ್ಲಿ ಹಾವೇರಿ ವಿಶ್ವವಿದ್ಯಾಲಯದಲ್ಲಿ ಗೌರವ ಸಭಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನೆಲದ ನಾಯಕರು’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಹೋರಾಟಗಾರರು ತ್ಯಾಗ, ಬಲಿದಾನಗೈದಿದ್ದಾರೆ. ದೇಶಾದ್ಯಂತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಾದಿಯಾಗಿ ಎಲ್ಲ ಮಹನೀಯರ ಅನುಪಮ ಕೊಡುಗೆಯನ್ನು ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಾವೇರಿ ವಿವಿಯಲ್ಲಿ ಪ್ರಾದೇಶಿಕ ಮಹತ್ವದ ಹಿನ್ನೆಲೆಯಲ್ಲಿ ಈ ಭಾಗದ ಯೋಧರು, ಸ್ವಾತಂತ್ರ್ಯ ಹೋರಾಟಗಾರರು, ರೈತರು ಮತ್ತು ಸಾಹಿತಿಗಳ ಹೆಸರಿನಲ್ಲಿ ಗೌರವ ಸಭಾಂಗಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕುಲಸಚಿವ ಡಾ.ಎಸ್.ಟಿ ಬಾಗಲಕೋಟಿ ಮಾತನಾಡಿ, ಇಂದಿನ ಯುವಜನತೆಗೆ ದೇಶದ ಸ್ವಾತಂತ್ರ್ಯಕ್ಕೆ ಜೀವದ ಹಂಗು ತೊರೆದು ಹೋರಾಡಿದ ನಾಯಕರ ಇತಿಹಾಸ ಗೊತ್ತಿಲ್ಲ. ಎಲ್ಲರೂ ವಾಟ್ಸ್ ಆ್ಯಪ್ ವಿಶ್ವವಿದ್ಯಾಲಯದ ಕೂಸುಗಳಾಗುತ್ತಿರುವುದು ಖೇದಕರ. ಇದರಿಂದಾಗಿ ನೈಜ ಸಂಗತಿಯನ್ನು ಅರಿಯದಿದ್ದರೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುತ್ತಿರುವ ವಿಷಯಗಳನ್ನು ಹರಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೈಲಾರ ಮಹದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ವಿ.ಎನ್ ತಿಪ್ಪನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾವೇರಿ ನೆಲದ ಸ್ವಾತಂತ್ರ್ಯ ಹೋರಾಟಗಾರರಾದ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿ, ಕರ್ಮಯೋಗಿ ಕೆ.ಎಫ್. ಪಾಟೀಲ, ಹಾಗೂ ಕ್ರಾಂತಿಪುರುಷ ಸಂಗೂರ ಕರಿಯಪ್ಪ ಅವರ ಕುರಿತು ಶರಣಕುಮಾರ ಜಾಲಿಹಾಳ, ಗೂಳಪ್ಪ ಅರಳಿಕಟ್ಟಿ ಹಾಗೂ ಸತೀಶ ಕುಲಕರ್ಣಿ ಉಪನ್ಯಾಸ ನೀಡಿದರು.
ಟ್ರಸ್ಟ್ ಸದಸ್ಯ ನಾಗೇಂದ್ರ ಕಟಕೋಳ, ಕಾರ್ಯದರ್ಶಿ ಸಿದ್ಧಲಿಂಗೇಶ್ವರ ರಂಗಣ್ಣವರ, ಹಾವೇರಿ ವಿವಿ ಆಡಳಿತಾಧಿಕಾರಿ ಡಾ.ಪ್ರಶಾಂತ ಎಚ್.ವೈ., ಪರಮೇಶಪ್ಪ ಮೈಲಾರಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.
ಸಾಕ್ಷ್ಯಚಿತ್ರ ಪ್ರದರ್ಶನ:
ಕಾರ್ಯಕ್ರಮದ ಕೊನೆಯಲ್ಲಿ ಗೂಳಪ್ಪ ಅರಳಿಕಟ್ಟಿ ನಿರ್ಮಾಣ ಮತ್ತು ನಿರ್ದೇಶನದ ‘ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.