

ಹಾವೇರಿ: ದೇಶದ ಸುರಕ್ಷತೆ, ಆಹಾರ ಭದ್ರತೆ ಹಾಗೂ ಜ್ಞಾನ ಸಂವರ್ಧನೆ ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ದೇಶ ಗಮನಾರ್ಹ ಅಭಿವೃದ್ಧಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೊೃೀತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಯುವಜನತೆಗೆ ಭಾರತೀಯ ಪರಂಪರೆಯ ಅರಿವು ಮೂಡಿಸುವ ಕಾರ್ಯವಾಗಬೇಕು. ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಯಾಗಿದೆ. ತಂತ್ರಜ್ಞಾನದ ನಾಗಾಲೋಟದಲ್ಲಿ ಮಾನವೀಯ ಮೌಲ್ಯಗಳಿಂದ ವಿಮುಖವಾಗಬಾರದು ಎಂದು ಸಲಹೆ ನೀಡಿದರು.
ದೇಶದ ಪ್ರಗತಿಯಲ್ಲಿ ಯೋಧರು, ರೈತರು ಮತ್ತು ವಿದ್ಯಾರ್ಥಿ- ಶಿಕ್ಷಕ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಜಾತಿ, ಮತ, ಪಂಥಗಳನ್ನು ಮೀರಿ, ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ಶ್ರಮಿಸಬೇಕು. ದೇಶವಾಸಿಗಳ ನೆಮ್ಮದಿಯ ಬದುಕಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಹಾವೇರಿ ವಿವಿ ಕುಲಸಚಿವ ಡಾ.ಎಸ್.ಟಿ ಬಾಗಲಕೋಟಿ, ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ, ಆಡಳಿತಾಧಿಕಾರಿ ಡಾ.ಪ್ರಶಾಂತ ಎಚ್.ವೈ., ಅನಿತಾ ಹಾಲಮತ, ಮತ್ತಿತರರು ಉಪಸ್ಥಿತರಿದ್ದರು.