ಹಾವೇರಿ ವಿವಿ ಮುಚ್ಚಿದರೆ ಪಠ್ಯಕ್ರಮ ವ್ಯತ್ಯಾಸ; ಜಿಎಚ್ ಕಾಲೇಜ್‌ನಲ್ಲಿ ಹಾವೇರಿ ವಿವಿ ಉಳಿಸಿ ಅಭಿಯಾನ; ಪ್ರಾಚಾರ್ಯ ಪ್ರೊ.ಡಿ.ಎ ಕೊಲ್ಲಾಪುರೆ ಹೇಳಿಕೆ

4 HVR 5
filter: 0; fileterIntensity: -0.01; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: night;hw-remosaic: false;touch: (0.44138908, 0.45984396);sceneMode: 524288;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಹಾವೇರಿ: ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್ ಪ್ರಾಚಾರ್ಯ ಪ್ರೊ.ಡಿ.ಎ ಕೊಲ್ಲಾಪುರೆ ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಹಾವೇರಿ ವಿವಿ ಉಳಿಸಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ನೂತನವಾಗಿ ಸ್ಥಾಪನೆಯಾದ ವಿಶ್ವವಿದ್ಯಾಲಯ ಹಾವೇರಿ ಭಾಗದ ಮಕ್ಕಳ ಶಿಕ್ಷಣಕ್ಕೆ ಹೊಸ ಹೊಸ ಆಯಾಮಗಳಲ್ಲಿ ಶಿಕ್ಷಣದ ಕಂಪನ್ನು ಬೀಸುವ ಮೊದಲೇ ಸರ್ಕಾರ ವಿವಿಯನ್ನು ಮುಚ್ಚುವ ಪ್ರಕ್ರಿಯೆ ನಡೆಸಿರುವುದು ಅತೀವ ಕಳವಳವನ್ನುಂಟು ಮಾಡಿದೆ. ಇದರಿಂದ ವಿವಿ ಅಧೀನ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆ ಮತ್ತು ಪಾಠಕ್ರಮಗಳಲ್ಲಿ ವ್ಯತ್ಯಾಸ ಉಂಟಾಗುತ್ತವೆ. ಶೀಘ್ರವೇ ಸರ್ಕಾರ ಈ ಕ್ರಮವನ್ನು ಹಿಂಪಡೆಯಬೇಕೆಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಗದೀಶ ಹೊಸಮನಿ ಮಾತನಾಡಿ, ಉನ್ನತ ಹಾಗೂ ಉದಾತ್ತ ದೃಷ್ಟಿಯಿಂದ ಆರಂಭವಾದ ಹಾವೇರಿ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿರುವುದು ಪ್ರಗತಿಯ ಸಂಕೇತವಾಗಿದೆ. ಹಲವಾರು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಗೆ ಪುನಶ್ಚೇತನ ತುಂಬುವ ಜತೆಗೆ ಆರ್ಥಿಕ ನೆರವು ನೀಡಿ ಉತ್ತಮ ಆಡಳಿತ ವ್ಯವಸ್ಥೆ ನಡೆಯುವಂತೆ ಮಾಡುವ ಅಗತ್ಯವಿದೆ. ಕೇವಲ ಆರ್ಥಿಕ ಇಲ್ಲವೇ ಇನ್ನಿತರ ನೆಪವನ್ನು ಹೇಳಿ ವಿವಿ ಮುಚ್ಚುವ ಕ್ರಮ ಸಮರ್ಪಕವಲ್ಲವೆಂದರು.

ಅಭಿಯಾನದ ನೇತೃತ್ವ ವಹಿಸಿದ್ದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್ ತಿಪ್ಪನಗೌಡರ ಮಾತನಾಡಿ, ವಿವಿ ಮುಚ್ಚುವ ಕುರಿತು ಹಾವೇರಿ ಜಿಲ್ಲೆಯಾದ್ಯಂತ ಅಪಸ್ವರಗಳು ಕೇಳಿ ಬಂದಿವೆ. ಇಂದಿನ ವಿದ್ಯಮಾನದಲ್ಲಿ ವಿವಿಯ ಅವಶ್ಯಕತೆ ಹಾವೇರಿ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಇದ್ದು ಇದರ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದರು.

ಸೋಮಣ್ಣ ಡೊಂಬರಮತ್ತೂರ, ಡಾ.ಎಂ.ಪಿ ಕಣವಿ ಮಾತನಾಡಿದರು. ಕಾಲೇಜ್‌ನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net