

ಹಾವೇರಿ: ನೂತನ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ನೇತೃತ್ವದ ನಿಯೋಗ ಬುಧವಾರ ನಗರದಲ್ಲಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರನ್ನು ಭೇಟಿ ಮಾಡಿ ವಿವಿ ಅಭಿವೃದ್ಧಿ ಕುರಿತು ಚರ್ಚಿಸಿದರು.
ನೂತನ ಶಾಸಕರಿಬ್ಬರಿಗೂ ಸನ್ಮಾನಿಸಿದ ಕುಲಪತಿಗಳ ನಿಯೋಗ ವಿಶ್ವವಿದ್ಯಾಲಯದ ಅಭಿವೃದ್ಧಿ ಕುರಿತು ಚರ್ಚಿಸಿದರು. ವಿವಿಗೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವ ಕುರಿತು ಮನವಿ ಮಾಡಿದರು. ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ವಿವಿಗೆ ಸಹಾಯ ಮಾಡುವುದಾಗಿ ಶಾಸಕರಿಬ್ಬರೂ ಭರವಸೆ ನೀಡಿದ್ದಾರೆ. ಈ ಕುರಿತು ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಹಾವೇರಿ ವಿವಿ ಮೂಲಗಳು ತಿಳಿಸಿವೆ.
ಈ ವೇಳೆ ಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ, ಸಿಡಿಸಿ ನಿರ್ದೇಶಕ ಡಾ.ಪ್ರಶಾಂತ ಎಚ್.ವೈ., ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಹಿರೇಮಠ, ವಿಶಾಲ ಹೇರೂರು, ಇತರರು ಇದ್ದರು.