ಹಾವೇರಿ ವಿವಿ ಮುಚ್ಚುವ ನಿರ್ಧಾರ ಕೈಬಿಡಿ; ಹುಕ್ಕೇರಿ ಮಠದ ಶ್ರೀ, ಇತರ ಸ್ವಾಮೀಜಿಗಳ ನಿಯೋಗದಿಂದ ಡಿಸಿ ಮೂಲಕ ಸರ್ಕಾರಕ್ಕೆ ಮನವಿ

3 HVR 2
Published on

ಹಾವೇರಿ: ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಮಾಡಬಾರದು. ನಮ್ಮ ಶಾಂತಿಯುತವಾದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದ ಹೊರವಲಯದ ದೇವಗಿರಿಯ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ನಂತರ ಶ್ರೀಗಳು ಮಾತನಾಡಿದರು. ಹಾವೇರಿ ಜಿಲ್ಲೆಯಾಗಿ ಇಪ್ಪತೈದು ವರ್ಷಗಳಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದೆಯೇ ಇದೆ. ಜಿಲ್ಲೆಯ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕು. ಶಿಕ್ಷಣಕ್ಕಾಗಿ ದಾವಣಗೆರೆ, ಧಾರವಾಡದಂತಹ ದೂರದ ನಗರಗಳಿಗೆ ಬಡ ಮಕ್ಕಳು ಅಲೆದಾಡುವಂತಾಗಬಾರದು. ಹಾವೇರಿ ವಿಶ್ವವಿದ್ಯಾಲಯ ವಿಲೀನ ಅಥವಾ ವಿಸರ್ಜನೆ ಮಾಡದೇ ಅಗತ್ಯ ಅನುದಾನ ನೀಡಿ ಬೆಳೆಸುವ ಮೂಲಕ ಜಿಲ್ಲೆಗೆ ಶೈಕ್ಷಣಿಕ ಕೊಡುಗೆ ಕೊಡಬೇಕು ಎಂದು ಒತ್ತಾಯಿಸಿದರು.

ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಇದಕ್ಕಾಗಿ ಜಿಲ್ಲೆಯ ಜನತೆ ಶಾಂತಿಯುತವಾಗಿ ಧ್ವನಿ ಎತ್ತಿರುವುದನ್ನು ಸರ್ಕಾರ ಪರಿಗಣಿಸಬೇಕು. ಇಲ್ಲವಾದರೆ ಹೋರಾಟ ಬೇರೆ ತಿರುವು ಪಡೆಯುತ್ತದೆ ಎಂದರು.

ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ಒಂದು ಸಾರಿ ನಮಗೆ ಸಿಕ್ಕ ಈ ವಿಶ್ವವಿದ್ಯಾಲಯದ ಅವಕಾಶವನ್ನು ನಾವು ಕಳೆದುಕೊಂಡರೆ ಮತ್ತೆ ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಹಾವೇರಿ ವಿವಿ ಬೇಕೇ ಬೇಕು ಎಂದರು.

ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿದರು.

ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮೌಲ್ವಿ ಮುಕ್ತಿಯಾರ್ ಅಹಮ್ಮದ್ ಭಾವಿಕಟ್ಟಿ, ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಸತೀಶ ಎಂ.ಬಿ., ಏಳುಕೋಟೆಪ್ಪ ಪಾಟೀಲ, ಹನುಮಂತ ಹಲಗೇರಿ, ಬಸವರಾಜ ಎಸ್., ಹೊನ್ನಪ್ಪ ಮರೆಮ್ಮನವರ, ಎಸ್.ಎನ್ ತಿಪ್ಪನಗೌಡ್ರ, ಗಿರೀಶ ಬಾರ್ಕಿ, ಉಡಚಪ್ಪ ಮಾಳಗಿ, ನಾರಾಯಣ ಕಾಳೆ, ಶೆಟ್ಟಿ ವಿಭೂತಿ ನಾಯಕ, ರಮೇಶ ಆನವಟ್ಟಿ, ನೀಲಪ್ಪ ಹರಿಜನ, ರಫೀಕ್‌ಸಾಬ ಅತ್ತಾರ, ಸಿ.ಆರ್ ಮಾಳಗಿ, ಪರಿಮಳ ಜೈನ, ಸಿ.ಎಸ್ ಮರಳಿಹಳ್ಳಿ, ಜುಬೇದಾ ನಾಯ್ಕ, ರಾಜೇಂದ್ರ ಹೆಗಡೆ, ಪೃಥ್ವಿರಾಜ ಬೆಟಗೇರಿ, ವಿರೂಪಾಕ್ಷ ಹಾವನೂರ, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ಆನಂದ ಕೆಳಗಿನಮನಿ, ಮಂಜಪ್ಪ ಕಂಕನವಾಡ, ಎಸ್.ಆರ್ ಹಿರೇಮಠ, ಈರಣ್ಣ ಬೆಳವಡಿ, ಮಂಜುನಾಥ ಸಣ್ಣಿಂಗಣ್ಣನವರ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net