ವಿವಿಗಳನ್ನು ಮುಚ್ಚುವುದು ಶಿಕ್ಷಣ ವಿರೋಧಿ ನೀತಿ * ಯಾವುದೇ ಕಾರಣಕ್ಕೂ ಬಂದ್ ಮಾಡಲು ಬಿಡಲ್ಲ; ಹಾವೇರಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಎಚ್ಚರಿಕೆ

17 HVR 2
Published on

ಹಾವೇರಿ: ಆರ್ಥಿಕ ಹಾಗೂ ಮೂಲ ಸೌಲಭ್ಯಗಳ ನೆಪ ಹೇಳಿ ರಾಜ್ಯ ಸರ್ಕಾರ ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಬಿವಿಪಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ಎಚ್ಚರಿಕೆ ನೀಡಿದರು. ರಾಜ್ಯದ 9 ಹೊಸ ವಿವಿಗಳನ್ನು ಮುಚ್ಚುವ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಅವರು ಮಾತನಾಡಿದರು. ರಾಜ್ಯದಲ್ಲಿ ಅಳ್ವಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಕಿಂಚಿತ್ತೂ ಗಮನಕೊಡದೆ ಈಗ ಮೂಲ ಸೌಲಭ್ಯಗಳ ನೆಪವೊಡ್ಡಿ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಮೂಲ ಸೌಕರ್ಯದ ನೆಪದಲ್ಲಿ ವಿವಿ ಮುಚ್ಚಲು ಮುಂದಾಗಿರುವುದು ಸರಿಯಲ್ಲ. ಸರ್ಕಾರಗಳು ವಿಶ್ವವಿದ್ಯಾಲಯಗಳ ಸ್ಥಾಪನೆ ಹಾಗೂ ಮುಚ್ಚುವ ಮನಸೋ ಇಚ್ಛೆ ಕಾರ್ಯದಿಂದ ವಿಶ್ವವಿದ್ಯಾಲಯಗಳ ಮೇಲೆ ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಇಂತಹ ನಿರ್ಣಯ ತೆಗೆದುಕೊಳ್ಳುವಾಗ ಶಿಕ್ಷಣ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಬೇಕು. ಬದಲಾಗಿ ರಾಜಕೀಯ ಕೇಂದ್ರಿತ ನಿರ್ಧಾರಗಳು ಆಗಬಾರದು ಎಂದರು. ವಿವಿಗಳನ್ನು ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲ ಸೌಲಭ್ಯಕ್ಕೆ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ, ಹಾವೇರಿ ತಾಲೂಕು ಸಂಚಾಲಕ ನವೀನ ಜಿ.ಕೆ., ಅಪರ್ಣ ಕುಲಕರ್ಣಿ, ಕಾವ್ಯಾ ಕೆ.ಪಿ., ಅರ್ಜುನ ಲಂಬಿ, ಕಾರ್ತಿಕ ಪಿ.ಕೆ., ರಾಕೇಶ ಬಣಕಾರ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net