ನೂತನ ಏಳು ವಿವಿಗಳಲ್ಲಿ ಕೌಶಲಾಧಾರಿತ ಕೋರ್ಸ್‌ಗಳ ಆರಂಭ; ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿಕೆ

20 HVR 5
Published on

ಹಾವೇರಿ: ನೂತನವಾಗಿ ರಚನೆಯಾಗಿರುವ ರಾಜ್ಯದ ಏಳು ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಜತೆಗೆ ಜ್ಞಾನ, ಆಧುನಿಕ ತಂತ್ರಜ್ಞಾನ, ಉದ್ಯೋಗ ಕೇಂದ್ರೀತ ಕೌಶಲಾಧಾರಿತ ಮಾನವೀಯ ಮೌಲ್ಯಗಳ ಪಠ್ಯಕ್ರಮಗಳನ್ನು ಅಳವಡಿಸಲು ಚಿಂತನೆ ಮಾಡಲಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ತಿಳಿಸಿದರು.
ತಾಲೂಕಿನ ಕೆರೆಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾವೇರಿ, ಬಾಗಲಕೋಟೆ, ಹಾಸನ, ಕೊಡಗು, ಕೊಪ್ಪಳ, ಬೀದರ್, ಚಾಮರಾಜನಗರ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾವೇರಿ ವಿವಿಯಲ್ಲಿ ಇಂದು ಸಮಾವೇಶಗೊಂಡು ವಿವಿಗಳ ಅಭಿವೃದ್ಧಿ ಕುರಿತು ಹಲವು ವಿಷಯಗಳನ್ನು ಚರ್ಚಿಸಿದ್ದೇವೆ. ಭವಿಷ್ಯದ ವಿಶ್ವವಿದ್ಯಾಲಯಗಳ ಬೆಳವಣಿಗೆ, ಆರ್ಥಿಕ ಸ್ವಾವಲಂಬನೆ, ನೂತನ ಪಠ್ಯಕ್ರಮ ಅಳವಡಿಕೆ ಕುರಿತು ಚರ್ಚಿಸಲಾಗಿದೆ ಎಂದರು.
ಕೌಶಲಾಧಾರಿತ ಪಠ್ಯಕ್ರಮಗಳ ಅಳವಡಿಕೆ ನಿಟ್ಟಿನಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕೌಶಲ ಕೇಂದ್ರಿತ ಪಠ್ಯಕ್ರಮ, ತರಬೇತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಖಾಸಗಿ ಕಂಪನಿಗಳ ಸಿ.ಎಸ್.ಆರ್. ಅನುದಾನಗಳನ್ನು ಬಡ ವಿದ್ಯಾರ್ಥಿಗಳ ಕೌಶಲಾಧಾರಿತ ಉನ್ನತ ಶಿಕ್ಷಣಕ್ಕೆ ನೆರವು ಒದಗಿಸಲು ಒಡಂಬಡಿಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾಲಯ ನಿರ್ವಹಣೆಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ.ಗಂಗಾಧರ, ಬಾಗಲಕೋಟೆ ವಿವಿ ಕುಲಪತಿ ಡಾ.ಬಿ.ಎಸ್.ದೇಶಪಾಂಡೆ, ಹಾಸನ ವಿವಿ ಕುಲಪತಿ ಪ್ರೊ.ಟಿ.ಸಿ.ತಾರಾನಾಥ, ಕೊಡಗು ವಿವಿ ಕುಲಪತಿ ಡಾ.ಅಶೋಕ ಆಲೂರು ನೂತನ ವಿಶ್ವವಿದ್ಯಾಲಯಗಳ ಭವಿಷ್ಯದ ನಡಿಗೆ ಕುರಿತಂತೆ ಮಾಹಿತಿ ಹಂಚಿಕೊಂಡರು. ನೂತನ ವಿಶ್ವವಿದ್ಯಾಲಯಗಳು ಈಗಾಗಲೇ ಯುಜಿಸಿ ಮಾನ್ಯತೆ ಹಾಗೂ ನೋಂದಣಿಯನ್ನು ಪಡೆದುಕೊಂಡಿವೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳ ಬದಲಾಗಿ ವೈಜ್ಞಾನಿಕ, ತಾಂತ್ರಿಕ, ಕೌಶಲಾಧಾರಿತ, ಮಾನವೀಯ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಈ ಏಳು ವಿಶ್ವವಿದ್ಯಾಲಯಗಳು ಪಠ್ಯಕ್ರಮಗಳನ್ನು ಅಳವಡಿಸಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ ವಿವಿ ಕುಲಸಚಿವರಾದ ಪ್ರೊ.ಎಸ್.ಟಿ.ಬಾಗಲಕೋಟಿ, ಪ್ರೊ.ವಿಜಯಲಕ್ಷ್ಮೀ ತಿರ್ಲಾಪುರ, ಇತರರಿದ್ದರು.
ಸ್ವತಂತ್ರ ಕಾಲೇಜ್ ಆರಂಭ
ನೂತನ ವಿವಿಗಳ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಆಯಾ ವಿವಿಗಳಲ್ಲೇ ಸಂಯೋಜನೆ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪೂರ್ಣಗೊಂಡಿದೆ. ವಿವಿ ಸಂಯೋಜಿತ ಸ್ವತಂತ್ರ ಕಾಲೇಜ್‌ಗಳನ್ನು ಶೀಘ್ರವೇ ಗುರುತಿಸಲಾಗುವುದು. ನೂತನ ವಿವಿಗಳಲ್ಲೇ ಪಿಎಚ್‌ಡಿ ವಿಭಾಗಕ್ಕೆ ಪ್ರವೇಶ ಪಡೆಯಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಂಗಮಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net