

ಹಾವೇರಿ: ಗ್ರಂಥಾಲಯ ವಿಜ್ಞಾನದಲ್ಲಿನ ಬೆಳವಣಿಗೆಗಳು ಆಧುನಿಕ ಜಗತ್ತಿನ ಅಗತ್ಯಗಳನ್ನು ಪೂರೈಸುವಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದಾಗಿದೆ. ಗ್ರಂಥಪಾಲಕರು ಗ್ರಂಥಾಲಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಜ್ಞಾನದಾಹ ತೀರಿಸುವ ಕೆಲಸ ಮಾಡುತ್ತಾರೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಏಪರ್ಡಿಸಿದ್ದ ‘ತಂತ್ರಜ್ಞಾನ ಯುಗದಲ್ಲಿ ಗ್ರಂಥಪಾಲಕರ ಪಾತ್ರ’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಂದಾಗಿ ಜಗತ್ತು ಇಂದು ಚಿಕ್ಕದಾಗಿ ತೋರುತ್ತಿದೆ. ಜ್ಞಾನದ ವಿಸ್ತರಣೆಯಲ್ಲಿ ತೊಡಗಿರುವ ಗ್ರಂಥಪಾಲಕರು ಹೊಸ ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎನ್.ಜೋಶಿ, ಡಾ.ಭರತ ಅಲಸಂದಿ, ಡಾ.ಆನಂದ ಫಕ್ಕೀರಗೌಡ್ರ ಉಪನ್ಯಾಸ ನೀಡಿದರು. ಗ್ರಂಥಪಾಲಕ ಪ್ರಕಾಶ ಮೂಕಮ್ಮನವರ, ಡಾ.ಕವಿತಾ ನಾಯ್ಕ, ಡಾ.ವಿಶ್ವನಾಥ ಚಿಂತಾಮಣಿ, ಮತ್ತಿತರರು ಉಪಸ್ಥಿತರಿದ್ದರು.