

ಹಾವೇರಿ: ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಜನರ ಅಶೋತ್ತರಗಳನ್ನು ಈಡೇರಿಸುವುದು ಎಷ್ಟು ಮುಖ್ಯವೋ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾವೇರಿ ವಿವಿಗೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು. ವಿವಿ ವಿಲೀನಗೊಳಿಸಲು ಮುಂದಾದರೆ ಹೋರಾಟಕ್ಕೆ ಸ್ವಾಮೀಜಿಗಳು ಮುಂದಾಗಬೇಕಾಗುತ್ತದೆ ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಆಯೋಜಿಸಿದ್ದ, ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಲು- ಬೆಳೆಸಲು ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಉದ್ಯೋಗವನ್ನು ಒದಗಿಸಿ ಸ್ವಾವಲಂಬಿಗಳಾಗಿಸಲು ಪೂರಕವಾಗಿ ಯೋಜನೆ ತಂದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅದರ ಬದಲಾಗಿ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ವಿಲೀನದ ಹೆಸರಲ್ಲಿ ಮುಚ್ಚಲು ಮುಂದಾಗಿರುವುದು ಖಂಡನೀಯ. ಹಾವೇರಿ ವಿವಿ ಉಳಿಸಿಕೊಳ್ಳಲು ಜಿಲ್ಲೆಯ ಎಲ್ಲ ಸ್ವಾಮೀಜಿಗಳು ಕಂಕಣ ಬದ್ದರಾಗಿದ್ದೇವೆ, ಸರ್ಕಾರ ವಿವಿ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ ಮುರಿಗೆಪ್ಪ ಮಾತನಾಡಿ, ರಾಜ್ಯ ಸರ್ಕಾರವೇ ಮಂಜೂರು ಮಾಡಿರುವ ವಿಶ್ವದ್ಯಾಲಯವನ್ನು ಮತ್ತೆ ಎರಡು ವರ್ಷದ ನಂತರ ರಾಜ್ಯ ಸರ್ಕಾರವೇ ಮುಚ್ಚುವುದು ಅಥವಾ ವಿಲೀನ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಸರ್ಕಾರ ಹಾವೇರಿ ವಿವಿಯನ್ನು ವಿಲೀನಗೊಳಿಸಲು ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದೆ. ಈ ವಿವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮಕ್ಕಳು ಕಲಿಯುತ್ತಿದ್ದಾರೆ. ಸರ್ಕಾರದ ಈ ನಡೆಯಿಂದ ಈ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ವಿವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಹೇಳಿದರು.
ಸಭೆಯಲ್ಲಿ ಬಣ್ಣದ ಮಠದ ಶ್ರೀ ಅಭಿನರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ವಿವಿಧ ಸಂಘಟನೆಗಳ ಪ್ರಮುಖರಾದ ಹೊನ್ನಪ್ಪ ಮರೆಮ್ಮನವರ, ಪ್ರೊ.ಡಿ.ವಿ ಹಿರೇಮಠ, ಎಸ್.ಎನ್ ತಿಪ್ಪನಗೌಡ್ರ, ಅನಿತಾ ಮಂಜುನಾಥ, ಕರಬಸಯ್ಯ ಬಸರೀಹಳ್ಳಿಮಠ, ಉಡಚಪ್ಪ ಮಾಳಗಿ, ಶೆಟ್ಟಿ ವಿಭೂತಿ, ಗೀತಾ ಲಮಾಣಿ, ಸಂಜೀವರೆಡ್ಡಿ ಮುದಗುಣಕಿ, ಮಲ್ಲೇಶ ಮದ್ಲೇರ, ಕೆ.ಎನ್ ಜಾನ್ವೇಕರ, ಡಾ.ತಿಪ್ಪೇಸ್ವಾಮಿ ಹೊಸಮನಿ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ, ಹನುಮಂತಗೌಡ ಗಾಜೀಗೌಡ್ರ, ಅಕ್ಕಮಹಾದೇವಿ ಹಾನಗಲ್ಲ, ಶ್ರೀನಿವಾಸ ಯರೇಸೀಮಿ, ಎಂ.ಕೆ ಮಕಬುಲ್, ಜುಬೇದಾ ನಾಯ್ಕ, ರೇಣುಕಾ ಗುಡಿಮನಿ, ಎಂ.ಆಂಜನೇಯ, ಇತರರಿದ್ದರು.
ಆರು ಶಾಸಕರು ವಿವಿ ಪರ
ಜಿಲ್ಲೆಯ ಆರು ಶಾಸಕರು ಹಾವೇರಿ ವಿವಿ ಉಳಿಸುವ ಪರವಾಗಿಯೇ ಇದ್ದಾರೆ. ಯಾವುದೇ ಕಾರಣಕ್ಕೂ ಹಾವೇರಿ ವಿಶ್ವವಿದ್ಯಾಲಯ ಮುಚ್ಚದಂತೆ ಸರ್ಕಾರದ ಮನವೊಲಿಸುವ ಕೆಲಸ ಮಾಡಲಾಗುವುದು. ಅಗತ್ಯ ಬಿದ್ದರೆ ಆರು ಶಾಸಕರು ಹಾಗೂ ಹೋರಾಟ ಸಮಿತಿ ನಿಯೋಗವನ್ನು ಸಿಎಂ ಬಳಿ ಕರೆದುಕೊಂಡು ಹೋಗಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ,, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಹೇಳಿದರು.