ಹಾವೇರಿ ವಿವಿ ಕ್ಯಾಂಪಸ್‌ನಲ್ಲಿ ಬಿಸಿಎ, ಎಂಸಿಎ ಆರಂಭಿಸಿ; ಎಬಿವಿಪಿ ಮನವಿಗೆ ವಿಸಿ ಪ್ರೊ.ಸುರೇಶ ಜಂಗಮಶೆಟ್ಟಿ ಸ್ಪಂದನೆ

8 HVR 7
Published on

ಹಾವೇರಿ: ಇಲ್ಲಿನ ಹೊರವಲಯ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಸಿಎ, ಎಂಸಿಎ ಹಾಗೂ ಎಲ್ಲ ಪದವಿ ಕಾಲೇಜ್‌ಗಳಲ್ಲಿ ಪತ್ರಿಕೊದ್ಯಮ ಹಾಗೂ ಸಮೂಹ ಸಂವಹನ ಅಧ್ಯಯನ ವಿಭಾಗಗಳನ್ನು ಪ್ರಾರಂಭಿಸುವಂತೆ ವಿದ್ಯಾರ್ಥಿ ಪರಿಷತ್ ಬುಧವಾರ ಮೌಲ್ಯಮಾಪನ ಕುಲಸಚಿವರ ಮೂಲಕ ಕುಲಪತಿಯವರಿಗೆ ಮನವಿ ಪತ್ರ ಸಲ್ಲಿಸಿತು.

ಎಬಿವಿಪಿಯ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಪ್ರಾರಂಭವಾಗಿ 2 ವರ್ಷಗಳಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ. ವಿಶ್ವ ವಿದ್ಯಾಲಯದಲ್ಲಿ ಕಲೆ ಹಾಗೂ ವಾಣಿಜ್ಯ ವಿಭಾಗದ ಸ್ನಾತಕೊತ್ತರ ಪದವಿಗಳ ಅಧ್ಯಯನ ವಿಭಾಗಗಳಿವೆ. ಆದರೆ ವಿಜ್ಞಾನ ವಿಭಾಗಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಡಿಮೆ ವಿಭಾಗಗಳಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಜಿಲ್ಲೆಯ ಹಿಂದುಳಿದ, ಬಡ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿ ಬಿಸಿಎ ಹಾಗೂ ಎಂಸಿಎ ಅಧ್ಯಯನ ಮಾಡುವಷ್ಟು ಆರ್ಥಿಕವಾಗಿ ಸಬಲರಿಲ್ಲ. ಆದ್ದರಿಂದ ವಿಶ್ವವಿದ್ಯಾಲಯದಲ್ಲಿ ಕಡಿಮೆ ಶುಲ್ಕದಲ್ಲಿ ಬಿಸಿಎ ಹಾಗೂ ಎಂಸಿಎ ಪ್ರಾರಂಭಿಸುವಂತೆ ಒತ್ತಾಯಿಸಿದರು.

ಅಭಾವಿಪ ಮನವಿಗೆ ಸ್ಪಂದಿಸಿದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ, ಬಿಸಿಎ ಕೋರ್ಸ್ ಕುರಿತು ಸಮೀಕ್ಷೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಸಕ್ತ ವರ್ಷದಿಂದಲೇ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಭರವಸೆ ನೀಡಿದರು.

ಹಾವೇರಿ ವಿಶ್ವವಿದ್ಯಾಲಯದ ಎಬಿವಿಪಿ ಕಾರ್ಯದರ್ಶಿ ನಾಗರಾಜ ಬ್ಯಾಡಗಿ, ಸಹನಾ ಪುರವಂತರ, ಸಿಂಧು ಮಡಿವಾಳರ, ಶರಣ ತೋಟದ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net