

ಹಾವೇರಿ: ಉಜ್ಜಯನಿ ಸದ್ಧರ್ಮ ಪೀಠದ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಇಷ್ಟಲಿಂಗ ಮಹಾಪೂಜಾ ಹಾಗೂ ದ್ವಾದಶ ಪಟ್ಟಾದಿಕಾರ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭ ಫೆ.21, 22 ಹಾಗೂ 23ರಂದು ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಿಕಲ್ಯಾಣ ಖ್ಯಾತಿಯ ಹಾವೇರಿಯಲ್ಲಿ ಉಜ್ಜಯಿನಿ ಜಗದ್ಗುರುಗಳ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ, ಧರ್ಮೋಪದೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.21ರಂದು ಸಂಜೆ 4ಕ್ಕೆ ಉಜ್ಜಯಿನಿ ಜಗದ್ಗುರುಗಳ ಪುರಪ್ರವೇಶ ಆಗಲಿದೆ. ಪುರಸಿದ್ದೇಶ್ವರ ದೇವಸ್ಥಾನದಿಂದ ಅಲಂಕೃತ ಸಾರೋಟದಲ್ಲಿ ಕುಂಭ ಹೊತ್ತ ಮಹಿಳೆಯರಿಂದ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುವರು. ರಾತ್ರಿ 7ಕ್ಕೆ ಭಾವೈಕ್ಯತಾ ಸಮಾರಂಭದ ಸಾನ್ನಿಧ್ಯ ವಹಿಸುವರು. ನಾಡಿನ ವಿವಿಧ ಮಠಾದೀಶರು, ಗಣ್ಯರು ಭಾಗವಹಿಸುವರು ಎಂದರು.
ಫೆ.22ರಂದು ಬೆಳಗ್ಗೆ 7.30ಕ್ಕೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಸಂಜೆ 7ಕ್ಕೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಫೆ.23ರಂದು ಬೆಳಗ್ಗೆ 7ಕ್ಕೆ ವಿವಿಧ ಮಠಾಧೀಶರಿಂದ, ಭಕ್ತರಿಂದ ಜಗದ್ಗುರು ಮಹಾಸನ್ನಿಧಿಯವರಿಗೆ ಹರಿದ್ರಾಲೇಪನ ಹಾಗೂ ಮಂಗಲಸ್ನಾನ ಇತರೆ ಧಾರ್ಮಿಕ ವಿವಿಧಾನಗಳು ನಡೆಯಲಿವೆ. ರಾತ್ರಿ 7ಕ್ಕೆ ಧರ್ಮಸಭೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿರೂಪಾಕ್ಷಪ್ಪ ಹತ್ತಿಮತ್ತೂರ, ಶಂಭುಲಿಂಗಪ್ಪ ಕೌದಿ, ಕರಬಸನಗೌಡ ಪಾಟೀಲ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಲಿಂಗಪ್ಪ ಕಲ್ಯಾಣಿ, ಸಂತೋಷ ಹಿರೇಮಠ, ಚನ್ನಬಸಯ್ಯ ಹಿರೇಮಠ, ಸಿದ್ದಲಿಂಗಪ್ಪ ಮಹರಾಜಪೇಟ, ಶಂಕ್ರಪ್ಪ ಕುಂದೂರ, ಸುರೇಶ ಮುರಡಣ್ಣವರ, ನಿಖಿಲ್ ಡೊಗ್ಗಳ್ಳಿ, ಇತರರಿದ್ದರು.