ಅಪಘಾತಕ್ಕೆ ಚಾಲಕರ ನಿರ್ಲಕ್ಷೃವೇ ಕಾರಣ ?; ಇಂಡಿಕೇಟರ್ ಇಲ್ಲದೇ ರಸ್ತೆ ಮೇಲೆ ನಿಂತಿದ್ದ ಲಾರಿ; ನಿದ್ರೆ ಮಂಪರಲ್ಲಿ ವೇಗವಾಗಿ ಬಂದ ಟಿಟಿ ?

29 HVR 1 C
Published on

ವಿಜಯವಾಣಿ ಸುದ್ದಿಜಾಲ ಹಾವೇರಿ
ಬ್ಯಾಡಗಿ ತಾಲೂಕು ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನ ಬಲಿಯಾಗಿದ್ದು, ಈ ದುರ್ಘಟನೆಗೆ ಲಾರಿ ಹಾಗೂ ಟೆಂಪೋ ಟ್ರಾವೆಲ್ಲರ್ (ಟಿಟಿ) ಚಾಲಕರ ನಿರ್ಲಕ್ಷೃವೇ ಕಾರಣ ಎಂಬ ಆರೋಪ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.
ನಿಸರ್ಗ ಕರೆ ಹಿನ್ನೆಲೆಯಲ್ಲಿ ಲಾರಿ ಚಾಲಕ ಚಿಕ್ಕಮಗಳೂರಿನ ರಮೇಶ ಎಚ್.ಟಿ. ಲಾರಿಯನ್ನು ರಸ್ತೆಬದಿಗೆ ನಿಲ್ಲಿಸದೇ ರಸ್ತೆ ಮೇಲೆಯೇ ನಿಲ್ಲಿಸಿದ್ದ. ಮುಖ್ಯವಾಗಿ ಕತ್ತಲ ಸಮಯದಲ್ಲಿ ಇಂಡಿಕೇಟರ್ ಹಾಕಿರಲಿಲ್ಲ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಿಟಿ ಚಾಲಕ ಆದರ್ಶ, ನಿದ್ರೆ ಮಂಪರಿನಲ್ಲಿ ಲಾರಿಯನ್ನು ಗಮನಿಸದೇ ನಿಯಂತ್ರಣ ತಪ್ಪಿ ಹಿಂದಿನಿಂದ ಲಾರಿಗೆ ಗುದ್ದಿ ಭೀಕರ ಅಪಘಾತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಚಾಲಕರ ನಿರ್ಲಕ್ಷೃದ ಆರೋಪದಡಿ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಸರ್ಗ ಕರೆಗಾಗಿ ಚಾಲಕ ಲಾರಿ ನಿಲ್ಲಿಸಿದ್ದ. ಕ್ಲೀನರ್ ಲಾರಿಯೊಳಗೆ ಮಲಗಿದ್ದ. ಅಪಘಾತವಾಗುತ್ತಿದ್ದಂತೆ ಚಾಲಕ ಓಡಿ ಹೋಗಿದ್ದ. ಕೂಡಲೇ ಇಬ್ಬರನ್ನೂ ಬಂಧಿಸಲಾಗಿದೆ. ಅಪಘಾತ ಸ್ಥಳದಲ್ಲಿದ್ದ ಟಿಟಿ ಹಾಗೂ ಲಾರಿಯನ್ನು ತೆರವುಗೊಳಿಸಲಾಗಿದೆ. ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಾವೇರಿ ಡಿವೈಎಸ್‌ಪಿ ಎನ್.ಎಸ್.ಪಾಟೀಲ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಮ್ಯಾಟ್ ಮೇಲೆ ಮಲಗಿದವರು ಬಚಾವ್ :
17 ವರ್ಷದ ಅರ್ಪಿತಾ ಹಾಗೂ 12 ವರ್ಷದ ಗೌತಮ ಇಬ್ಬರೂ ಟೆಂಪೋ ಟ್ರಾವೆಲ್ಲರ್‌ನಲ್ಲಿ ಕೆಳಗೆ ಮ್ಯಾಟ್ ಮೇಲೆ ಮಲಗಿದ್ದರು. ಅನ್ನಪೂರ್ಣ ಹಿಂದೆ ಕುಳಿತಿದ್ದರು. ಹಾಗಾಗಿ, ಅವರಿಗೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿ, ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಸಿಯುನಲ್ಲಿ ಪರಶುರಾಮ
ಗಾಯಗೊಂಡಿದ್ದ ನಾಲ್ವರಿಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, 48 ವರ್ಷದ ಪರಶುರಾಮ ಪರಿಸ್ಥಿತಿ ಗಂಭೀರವಾಗಿದೆ. ಇವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರವೇ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನ್ನಪೂರ್ಣ, ಅರ್ಪಿತಾ ಹಾಗೂ ಗೌತಮ್ ಅವರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಸರ್ಕಾರದಿಂದ ಕಠಿಣ ಕ್ರಮ ಅಗತ್ಯ
ಭೀಕರ ಅಪಘಾತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಸ್ತೆಬದಿ ವಾಹನ ಪಾರ್ಕಿಂಗ್, ಹೆದ್ದಾರಿಯಲ್ಲಿ ಲೇನ್ ಡಿಸಿಪ್ಲೇನ್ ಹಾಗೂ ರಾತ್ರಿ ವೇಳೆ ವಾಹನ ಚಾಲನೆ ಕುರಿತು ಕಟ್ಟುನಿಟ್ಟಿನ ನಿಯಮಗಳ ಪಾಲನೆ ಕುರಿತು ಸರ್ಕಾರ ಮುಂದಡಿ ಇಡಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net