ಕಣ್ಣು ತೆರೆಯದ ಟ್ರಾಫಿಕ್ ಸಿಗ್ನಲ್; ವಾಹನ ಸವಾರರು, ಪಾದಚಾರಿಗಳಿಗೆ ಸಂಕಷ್ಟ; ನಿತ್ಯ ಸಂಭವಿಸುತ್ತಿವೆ ಸಣ್ಣ-ಪುಟ್ಟ ಅಪಘಾತ

29 HVR 2 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರಮುಖ ವೃತ್ತಗಳಲ್ಲಿನ ಟ್ರಾಫಿಕ್ ಸಿಗ್ನಲ್‌ಗಳು ಕಳೆದ 25 ದಿನಗಳಿಂದ ಬಂದ್ ಆಗಿದ್ದು, ವಾಹನ ಸವಾರರು, ಪಾದಚಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದ ಪ್ರತಿನಿತ್ಯ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
ನಗರದ ಹೃದಯಭಾಗ ಹೊಸಮನಿ ಸಿದ್ದಪ್ಪ ವೃತ್ತ, ಶಹರ ಠಾಣೆ ಎದುರಿನ ಚನ್ನಮ್ಮ ವೃತ್ತ, ಗುತ್ತಲ ಕ್ರಾಸ್ ಕೆಇಬಿ ವೃತ್ತ, ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಂಚಾರ ಸೂಚನಾ ವಿದ್ಯುದೀಪಗಳು ಕಣ್ಣು ತೆರೆಯುತ್ತಿಲ್ಲ. ಶಿವಮೊಗ್ಗ ಮೂಲದ ಶ್ರೀನಿವಾಸ ಎಂಬುವರು ಸಿಗ್ನಲ್‌ಗಳ ನಿರ್ವಹಣಾ ಗುತ್ತಿಗೆ ಪಡೆದಿದ್ದರು. ಅವರ ನಿರ್ವಹಣೆ ಅವಧಿ ಪೂರ್ಣಗೊಂಡ ಪರಿಣಾಮ ಈ ಸಮಸ್ಯೆ ಉದ್ಭವಿಸಿದೆ.
ಮುಖ್ಯವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿನ ಸಿಗ್ನಲ್‌ನ ಮದರ್ ಬೋರ್ಡ್ ದುರಸ್ಥಿಗೆ ಒಳಗಾಗಿದೆ. ಇದರಿಂದ ಕಳೆದ 25 ದಿನಗಳಿಂದ ಬಂದ್ ಆಗಿವೆ. ಜಿಲ್ಲಾ ಕೇಂದ್ರೀಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಸಿಗ್ನಲ್ ಮೂಲಕ ನಿತ್ಯ ಸಾವಿರಾರು ಜನ ವಾಹನಗಳ ಮೂಲಕ ಓಡಾಡುತ್ತಾರೆ. ಪ್ರತಿ ಸೋಮವಾರ, ಗುರುವಾರ ಮಾರುಕಟ್ಟೆಗೆ ಜನ ಬೇರೆ ತಾಲೂಕು, ಹಳ್ಳಿಗಳಿಂದ ಇಲ್ಲಿಗೆ ಬರುತ್ತಾರೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವಾಗಿ ಶಾಲಾ-ಕಾಲೇಜಿಗೆ ಸಂಚರಿಸುತ್ತಾರೆ.
ಸಿಗ್ನಲ್ ಇಲ್ಲದ ಕಾರಣ ಬಸ್, ಲಾರಿ, ಟೆಂಪೋ, ಮಿನಿ ಬಸ್, ಟಂಟಂ, ಗೂಡ್ಸ್, ಕಾರು, ಆಟೋ, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ವಾಹನಗಳು ಯಾವಾಗ ಸಂಚರಿಸಬೇಕು ಎಂಬ ಸಿಗ್ನಲ್ ಸಿಗದ ಕಾರಣ ಬೇಕಾಬಿಟ್ಟಿ ಓಡಾಡುತ್ತಿವೆ. ಇದರಿಂದ ಇಲ್ಲಿ ನಿತ್ಯವೂ ಒಂದಲ್ಲ ಒಂದು ವಾಹನ ಅಪಘಾತಕ್ಕೀಡಾಗುತ್ತಿದೆ. ರಸ್ತೆ ದಾಟಲು ಪಾದಚಾರಿಗಳು ಹರಸಾಹಸ ಪಡುವಂತಾಗಿದೆ.
ದೊಡ್ಡ ಅವಘಡ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಗ್ನಲ್‌ಗಳ ಸಮಸ್ಯೆಗೆ ಮುಕ್ತಿ ಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹೆಚ್ಚುವರಿ ಕೆಲಸದ ಹೊರೆ
ಹಾವೇರಿ ಸಂಚಾರ ಠಾಣೆಯ 18 ಸಿಬ್ಬಂದಿ ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡಿದ್ದಾರೆ. 18 ಸಿಬ್ಬಂದಿ ಈಗಾಗಲೇ ರಿಲೀವ್ ಆಗಿದ್ದು, ಬೇರೆಡೆಯಿಂದ ಈ ಠಾಣೆಗೆ ವರ್ಗಾವಣೆಗೊಂಡವರು ಹಾಜರಾಗಲು ಕಾಲಾವಕಾಶವಿದೆ. ಹಾಗಾಗಿ, ಸದ್ಯ ಠಾಣೆಯಲ್ಲೀಗ ಐದಾರು ಸಿಬ್ಬಂದಿ ಮಾತ್ರ ಇದ್ದಾರೆ. ಇದ್ದ ಸಿಬ್ಬಂದಿ ಮೇಲೆ ಸರ್ಕಲ್‌ಗಳಲ್ಲಿ ವಾಹನಗಳ ನಿಯಂತ್ರಿಸುವ ಹೆಚ್ಚುವರಿ ಹೊಣೆ ಹೆಗಲೇರಿದೆ ಎನ್ನಲಾಗಿದೆ.

ಕೋಟ್:
ಟ್ರಾಫಿಕ್ ಸಿಗ್ನಲ್ ನಿರ್ವಹಣೆ ವಹಿಸಿಕೊಂಡಿದ್ದ ಶ್ರೀನಿವಾಸ ಎಂಬುವರ ಅವಧಿ ಮುಗಿದಿದ್ದು, ರೀನಿವಲ್ ಮಾಡಲಾಗುತ್ತಿದೆ. ಸದ್ಯ ನಮ್ಮ ಸಿಬ್ಬಂದಿ ವೃತ್ತದಲ್ಲಿ ನಿಂತು ವಾಹನಗಳ ಸರಾಗ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿಗ್ನಲ್ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಎನ್.ಆರ್.ಕಾಟೆ, ಪಿಎಸ್‌ಐ, ಹಾವೇರಿ ಸಂಚಾರ ಠಾಣೆ

ಕೋಟ್:
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಟ್ರಾಫಿಕ್ ಸಿಗ್ನಲ್ ಅತ್ಯಗತ್ಯವಾಗಿದೆ. ಸಿಗ್ನಲ್ ಇಲ್ಲದ ಕಾರಣ ಸುಗಮವಾಗಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಪಘಾತ ಸಂಭವ ಇದೆ. ಈ ಕೂಡಲೇ ಸಿಗ್ನಲ್ ದುರಸ್ಥಿಪಡಿಸಬೇಕು.
- ಗಂಗಾಧರ ಕುಲಕರ್ಣಿ, ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net