

ಕೇಶವಮೂರ್ತಿ ವಿ.ಬಿ. ಹಾವೇರಿ
ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತು ಬಿದ್ದು ಸಾಲದ ಸುಳಿಗೆ ಸಿಲುಕಿ ಹೈರಾಣಾಗಿದ್ದ ರೈತರೊಬ್ಬರು ನರೇಗಾ ಯೋಜನೆಯ ಸಹಕಾರದೊಂದಿಗೆ ರೇಷ್ಮೆ ಕೃಷಿ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಮೊದಲಿಗಿಂತ ಉತ್ತಮ ಆದಾಯ ಗಳಿಸುತ್ತ ಗೆಲುವಿನ ನಗೆ ಬೀರುತ್ತಿದ್ದಾರೆ.
ತಾಲೂಕಿನ ಕನವಳ್ಳಿ ಗ್ರಾಮದ ಅಲ್ಲೋದ್ದೀನಸಾಬ ಬು. ಸಕ್ಕರಖಾನವರ ಯಶಸ್ಸು ಸಾಧಿಸಿದ ರೈತ. ಅಲ್ಲೋದ್ದೀನಸಾಬ ಕೃಷಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಸಾಲದ ಹೊರೆಯಿಂದ ತತ್ತರಿಸುತ್ತಿದ್ದರು. ಆದರೂ ಎದೆಗುಂದದೆ ಕೃಷಿಯಲ್ಲೇ ಏನಾದರೂ ಸಾಧಿಸಬೇಕು ಎಂಬ ಛಲದಿಂದ ರೇಷ್ಮೆ ಬೆಳೆಯ ಹೊಸ ಸಾಹಸಕ್ಕೆ ಮುಂದಾದರು. ಅದರ ಫಲ ಅದ್ಬುತ ಯಶಸ್ಸನ್ನೇ ತಂದುಕೊಟ್ಟಿದೆ.
ಕೇವಲ 3 ಎಕರೆ ಜಮೀನು ಹೊಂದಿದ ಅಲ್ಲೋದ್ದೀನಸಾಬ ಮೆಕ್ಕೆಕೋಳ, ಇತರ ಬೆಳೆ ಬೆಳೆದು ಕೈಸುಟ್ಟುಕೊಂಡಿದ್ದರು. ಬದುಕು ಅಸಹಾಯಕ ಸ್ಥಿತಿಯಲ್ಲಿದ್ದಾಗ ಕೈಹಿಡಿದದ್ದು ರೇಷ್ಮೆ ಬೇಸಾಯ. 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಬೇಸಾಯ ಪ್ರಾರಂಭಿಸಿದರು. ಹೊಲದಲ್ಲಿರುವ ಕೊಳವೆಬಾವಿ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡರು. 3 ಎಕರೆ ಭೂಮಿಯಲ್ಲಿ ಹೊಸ ಹಿಪ್ಪುನೇರಳೆ ತೋಟ ಸ್ಥಾಪನೆ ಮಾಡಿ ರೇಷ್ಮೆಯನ್ನು ಬೆಳೆದರು.
ತಿಂಗಳಿಗೆ 30 ಸಾವಿರ ಆದಾಯ
ಪ್ರಾರಂಭಿಕ ಹಂತದಲ್ಲಿ ಕಡಿಮೆ ರೇಷ್ಮೆ ಬರುತ್ತಿದ್ದ ಹಿನ್ನೆಲೆ ತಿಂಗಳಿಗೆ 5ರಿಂದ 8 ಸಾವಿರ ರೂ. ಆದಾಯ ಬರುತ್ತಿತ್ತು. ನಂತರ ರೇಷ್ಮೆ ಬೆಳೆಯ ಪ್ರಮಾಣ ಹೆಚ್ಚಾಗಿದ್ದು ತಿಂಗಳಿಗೆ ಕನಿಷ್ಠ 25ರಿಂದ 30 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ರೇಷ್ಮೆಯಿಂದ ಕೈತುಂಬ ಆದಾಯ ಬರುತ್ತಿರುವುದರಿಂದ ಕುಟುಂಬಕ್ಕೆ ಭಾಗ್ಯಲಕ್ಷ್ಮೀ ಒಲಿದು ಬಂದಂತಾಗಿದೆ ಎಂದು ಅಲ್ಲೋದ್ದೀನಸಾಬ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಟ್:
ಈ ಹಿಂದೆ ಕೃಷಿಯಿಂದ ನಷ್ಟ ಅನುಭವಿಸಿದ್ದ ನನಗೆ ನರೇಗಾ ಯೋಜನೆ ಅಡಿ ಹೊಸ ಹಿಪ್ಪುನೆರಳೆ ತೋಟ ನಿರ್ಮಾಣದಿಂದ ರೇಷ್ಮೆ ಬೆಳೆಯಲು ಸರ್ಕಾರ ಸಹಾಯಧನ ಕೊಟ್ಟಿದೆ. ರೇಷ್ಮೆ ಬೇಸಾಯ ಪ್ರಾರಂಭಿಸಿದ್ದರಿಂದ ನಮ್ಮ ಕಷ್ಟದ ಜೀವನ ದೂರವಾಗಿದೆ. ಕುಟುಂಬದ ಇತರ ಸದಸ್ಯರಿಗೂ ಇದರಿಂದ ಉದ್ಯೋಗ ದೊರೆಯಿತು. ಬೇರೆಯವರನ್ನು ಅವಲಂಬಿಸುವುದು ತಪ್ಪಿತು.
- ಅಲ್ಲೋದ್ದೀನಸಾಬ ಸಕ್ಕರಖಾನವರ, ಕನವಳ್ಳಿ ರೈತ
ಕೋಟ್:
ನರೇಗಾ ಯೋಜನೆ ಅಡಿ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿ ಗ್ರಾಮೀಣ ಭಾಗದ ಜನರ ಬದುಕಲ್ಲಿ ಹೊಸ ಭರವಸೆ ಹುಟ್ಟಿಸಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಲಾಭ ಪಡೆದುಕೊಳ್ಳಬೇಕು.
- ಡಾ.ಪರಮೇಶ ಎನ್. ಹುಬ್ಬಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಹಾವೇರಿ
ಕೋಟ್:
ರೇಷ್ಮೆ ಇಲಾಖೆಯಿಂದ ರೇಷ್ಮೆ ಶೆಡ್ ನಿರ್ಮಿಸಲು ಒಂದರಿಂದ ಎರಡು ಲಕ್ಷ ರೂ.ವರೆಗೆ ಸಬ್ಸಿಡಿ ಕೊಡಲಾಗುತ್ತದೆ. ಮೆಕ್ಕೆಜೋಳ ಬೆಳೆಯುತ್ತಿದ್ದ ಹಲವು ರೈತರು, ಇದೀಗ ರೇಷ್ಮೆ ಬೆಳೆಯುತ್ತಿದ್ದಾರೆ. ನರೇಗಾದಲ್ಲಿ ರೇಷ್ಮೆ ಬೆಳೆದು ರೈತರು ಲಾಭ ಪಡೆದಿದ್ದಾರೆ. ಇತರ ಗ್ರಾಮ ಪಂಚಾಯಿತಿಗಳ ನರೇಗಾ ಫಲಾನುಭವಿಗಳು, ರೈತರು ಯೋಜನೆಯ ಲಾಭ ಪಡೆದುಕೊಂಡು ಉತ್ತಮ ಬೆಳೆ, ಆದಾಯ ಪಡೆಯಬಹುದು.
- ಪರಶುರಾಮ ಗೋಣೆಮ್ಮನವರ, ರೇಷ್ಮೆ ವಿಸ್ತರಣಾಧಿಕಾರಿ, ಹಾವೇರಿ