ಹಾವೇರಿ: ಸಿನಿಮೀಯ ರೀತಿಯಲ್ಲಿ 12 ವರ್ಷದ ಬಾಲಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿದ್ದು, ಆ ಬಾಲಕ ಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ಪುರದ ಓಣಿ ಚೌಡೇಶ್ವರಿ ವೃತ್ತದ ಬಳಿಯ ನಿವಾಸಿ ಮಹ್ಮದ್ ಅಯಾನ್ ಮಹ್ಮದ್‌ರಫೀಕ್ ಚಳ್ಯಾಳ ಅಪಹರಣಕಾರರಿಂದ ತಪ್ಪಿಸಿಕೊಂಡ ಬಾಲಕ.
ಅಯಾನ್ ಭಾನುವಾರ ಸಂಜೆ ಹತ್ತರಗೇರಿ ಓಣಿಯಲ್ಲಿನ ಮದರಸಾ ಕಡೆಗೆ ಹೋಗುತ್ತಿದ್ದ. ಮಹಾಲಕ್ಷ್ಮೀ ಸೊಸೈಟಿ ಬಳಿ ಹೊರಟಿದ್ದಾಗ ನಾಲ್ವರು ಆರೋಪಿತರು ಸಿಲ್ವರ್ ಬಣ್ಣದ ಕಾರಿನಲ್ಲಿ ಬಂದು ಅಯಾನ್‌ನನ್ನು ಅಪಹರಿಸಿಕೊಂಡು ಹೋಗಿದ್ದರು. ಜೋರಾಗಿ ಕೂಗತೊಡಗಿದಾಗ ಬಾಲಕನ ಬೆನ್ನಿಗೆ, ತಲೆಗೆ ಹೊಡೆದ ಅಪಹರಣಕಾರರು ಕಾಲಿಗೆ ವೈರ್ ಕಟ್ಟಿದ್ದರು. ಅಕ್ಕಿಪೇಟೆ ಬಳಿ ಕಾರು ನಿಲ್ಲಿಸಿ ಹಿಂದಿನ ಸೀಟಿನಲ್ಲಿದ್ದವರು ನಿಸರ್ಗ ಕರೆಗೆ ತೆರಳಿದ್ದರು. ಮುಂದಿನ ಸೀಟ್‌ನಲ್ಲಿದ್ದವರು ಮೊಬೈಲ್‌ನಲ್ಲಿ ನಿರತರಾಗಿದ್ದರು. ಆಘ ವೈರ್ ಬಿಚ್ಚಿಕೊಂಡು ತಪ್ಪಿಸಿಕೊಂಡು ಬಂದಿದ್ದಾನೆ.
ಮಗನ ಅಪಹರಣ ಮಾಡಲು ಯತ್ನಿಸಿದ ನಾಲ್ವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಅಯಾನ್ ತಂದೆ ಮಹ್ಮದ್‌ರಫೀಕ್ ಚಳ್ಯಾಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.