ಪ್ರವಾಸೋದ್ಯಮಕ್ಕೆ ಬೇಕು ಆನೆಬಲ; 15 ಹೊಸ ಪ್ರವಾಸಿ ತಾಣಗಳಿಗೆ ರಾಜ್ಯ ಸರ್ಕಾರ ಅಸ್ತು; ಮೂಲ ಸೌಕರ್ಯಗಳಿಲ್ಲದೇ ಪ್ರವಾಸಿಗರು ಸುಸ್ತು

Tourism Story
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ತುಂಗಭದ್ರಾ, ವರದಾ, ಧರ್ಮಾ, ಕುಮಧ್ವತಿ ನದಿಗಳು ಸೇರಿ ಅಪಾರ ನೈಸರ್ಗಿಕ ಸಂಪತ್ತು, ಐತಿಹಾಸಿಕ ತಾಣಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳು, ಪಾರಂಪರಿಕ ತಾಣಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಹಾವೇರಿ ಜಿಲ್ಲೆ ಪ್ರವಾಸೋದ್ಯಮದಲ್ಲಿ ಮಾತ್ರ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಉತ್ತೇಜನ ನೀಡುವ ಮೂಲಕ ಆನೆಬಲ ನೀಡುವ ಕಾರ್ಯ ಆಗಬೇಕಿದೆ.

ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ 2024-2029ರ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿದ್ದು, ಅದರಲ್ಲಿ ಜಿಲ್ಲೆಯ 15 ಹೊಸ ಪ್ರವಾಸಿ ತಾಣಗಳಿಗೆ ಅಧಿಕೃತ ಮಾನ್ಯತೆ ದೊರಕಿಸಿಕೊಟ್ಟಿರುವುದು ಸಮಾಧಾನಕರ ಸಂಗತಿಯಾಗಿದೆ. ಉಳಿದಂತೆ ಈಗಾಗಲೇ ಚಾಲ್ತಿಯಲ್ಲಿರುವ 21 ಪ್ರವಾಸಿ ತಾಣಗಳು ಮೂಲಸೌಕರ್ಯಗಳ ಕೊರತೆಯಿಂದ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿನ್ನಡೆ ಕಂಡಿವೆ.

ಚಾಲುಕ್ಯ ಶಿಲ್ಪಕಲೆ ಶೈಲಿಯ ಹತ್ತಾರು ಗುಡಿ, ಗೋಪುರಗಳಿವೆ. ಶ್ರೀಮಂತ ಪರಂಪರೆಯನ್ನು ಹೊಂದಿರುವ ಜಿಲ್ಲೆಯಿಂದ ಅನೇಕ ಸಾಧು ಸಂತರು ಜಗತ್ ಪ್ರಸಿದ್ಧಿ ಪಡೆದಿದ್ದಾರೆ. ಶ್ರೀಮಂತ ನೈಸರ್ಗಿಕ ಸಂಪತ್ತೂ ಇಲ್ಲಿದೆ. ಕನಕದಾಸರ ಕಾಗಿನೆಲೆ, ಬಾಡ ಕನಕದಾಸರ ಅರಮನೆ, ಷರೀಫಜ್ಜನ ಶಿಶುನಾಳ, ಗಳಗನಾಥ, ಚೌಡಯ್ಯದಾನಪುರ, ಮದಗದ ಕೆರೆ, ಸರ್ವಜ್ಞನ ಜನ್ಮಸ್ಥಳ ಅಬಲೂರ, ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಕಾಂತೇಶ ದೇಗುಲ, ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನ, ಐರಣಿ ಹೊಳೆಮಠ, ರಾಣೆಬೆನ್ನೂರ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರ ನವಿಲುಧಾಮ, ಸವಣೂರ ದೊಡ್ಡಹುಣಸೆಮರ ಮಠ, ನವಾಬರ ಬಂಗಲೆ, ವಿಷ್ಣುತೀರ್ಥ, ಸೇರಿದಂತೆ ಮತ್ತಿತರ ಅನೇಕ ಪ್ರವಾಸಿ ತಾಣಗಳಿವೆ. ಆದರೆ, ಸೂಕ್ತ ಪ್ರಚಾರ, ಮೂಲ ಸೌಲಭ್ಯ, ಭದ್ರತೆ ಕಲ್ಪಿಸಿಲ್ಲ. ಹಾಗಾಗಿ, ಈ ಸ್ಥಳಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಹೊಸದಾಗಿ ಘೋಷಿಸಿರುವ 15 ಪ್ರವಾಸಿ ತಾಣಗಳು ಸೇರಿ ಜಿಲ್ಲೆಯ 36 ಪ್ರವಾಸಿ ತಾಣಗಳಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಬೇಕು. ಅಭಿವೃದ್ಧಿಗೆ ಸಮಗ್ರವಾದ ರೂಪುರೇಷೆ ಸಿದ್ಧಪಡಿಸಬೇಕು. ಹೊರ ಜಿಲ್ಲೆ, ರಾಜ್ಯಗಳ ಜನರಿಗೆ ತಿಳಿಯುವಂತೆ ಅಗತ್ಯ ಪ್ರಚಾರ ಕಾರ್ಯ ಕೈಗೊಳ್ಳಬೇಕು. ರಸ್ತೆ, ಕುಡಿಯುವ ನೀರು, ಸಾರಿಗೆ ಸೌಕರ್ಯ, ಸಿಸಿಟಿವಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ, ಪ್ರಚಾರ, ಮಾಹಿತಿ ಒದಗಿಸುವ ಕೆಲಸ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಆಗಬೇಕು ಎಂಬುದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.

ಹೊಸ ತಾಣಗಳ ಪಟ್ಟಿ :

ರಾಜ್ಯ ಸರ್ಕಾರ ಜಿಲ್ಲೆಯ 15 ಹೊಸ ಪ್ರವಾಸಿ ತಾಣಗಳನ್ನು ಅಧಿಕೃತವಾಗಿ ಘೊಷಿಸಿದೆ. ಹಾನಗಲ್ಲ ತಾಲೂಕು ಕಲಕೇರಿಯ ಸೋಮೇಶ್ವರ ಹಾಗೂ ಬಸವೇಶ್ವರ ದೇವಾಲಯ, ಹಿರೇಂಕಾಂಶಿಯ ಲೋಕಪರಮೇಶ್ವರ ದೇವಾಲಯ, ತಿಳವಳ್ಳಿಯ ಶಾಂತೇಶ್ವರ ದೇಗುಲ, ಬಾಳಂಬೀಡದ ಕಲ್ಮೇಶ್ವರ ಮತ್ತು ರಾಮೇಶ್ವರ ಗುಡಿ, ಬ್ಯಾಡಗಿ ತಾಲೂಕಿನ ಶಿಡೇನೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಹಿರೇಹಳ್ಳಿಯ ಈಶ್ವರ ದೇವಸ್ಥಾನ, ರಾಣೆಬೆನ್ನೂರ ತಾಲೂಕಿನ ಹೊಳೆಆನ್ವೇರಿಯ ಸಂಗಮೇಶ್ವರ ದೇಗುಲ, ಅರೆಮಲ್ಲಾಪುರದ ಬೆಟ್ಟದ ಮಲ್ಲಿಕಾರ್ಜುನ ಗುಡ್ಡ, ಹರಳಹಳ್ಳಿಯ ಸೋಮೇಶ್ವರ ಹಾಗೂ ಕಲ್ಮೇಶ್ವರ ದೇವಾಲಯ, ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನ/ ಕೆರೆ, ಹಂಸಭಾವಿಯ ಕಲ್ಮೇಶ್ವರ ದೇಗುಲ, ಹಾವೇರಿಯ ಗಾಂಧಿಭವನ, ಪುರಸಿದ್ದೇಶ್ವರ ದೇವಾಲಯ, ಶಿಗ್ಗಾಂವಿಯ ಹುಣಸಿಕಟ್ಟಿಯ ಶಿವನ ದೇಗುಲಗಳು ಹೊಸ ಪ್ರವಾಸಿ ತಾಣವೆಂಬ ಅಧಿಕೃತ ಮಾನ್ಯತೆ ಪಡೆದ ಪಟ್ಟಿಯಲ್ಲಿವೆ.

ಬಸವರಾಜ ಬೊಮ್ಮಾಯಿ, ಕೋಳಿವಾಡ ಆಸಕ್ತಿ

ಸಂಸದ ಬಸವರಾಜ ಬೊಮ್ಮಾಯಿ, ರಾಣೆಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಪ್ರವಾಸೋದ್ಯಮದ ಅಭಿವೃದ್ಧಿಗೆ ಆಸಕ್ತಿ ತೋರಿದ್ದು, ಕೋಳಿವಾಡ ತಮ್ಮ ಕ್ಷೇತ್ರದ ಅರೆಮಲ್ಲಾಪುರದ ಬೆಟ್ಟದ ಮಲ್ಲಪ್ಪ ಗುಡ್ಡ, ಕೃಷ್ಣಮೃಗ ಅಭಯಾರಣ್ಯ ಪ್ರವಾಸಿ ತಾಣಗಳ ಚಾರಣಕ್ಕೆ ಜೀಪ್‌ಗಳ ವ್ಯವಸ್ಥೆ ಮಾಡಿದ್ದಾರೆ. ದೊಡ್ಡಕೆರೆಯಲ್ಲಿ ಬೋಟಿಂಗ್ ಆರಂಬಿಸಿದ್ದಾರೆ. ಜಿಲ್ಲೆಯ ಇತರ ಶಾಸಕರೂ ತಮ್ಮ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಕಾಯಕಲ್ಪ ಒದಗಿಸಬೇಕಿದೆ.

ಕೋಟ್:

ಜಿಲ್ಲೆಯ 36 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಎಲ್ಲೆಡೆ ಮೂಲಸೌಕರ್ಯ ಕಲ್ಪಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. 16 ಗೃಹರಕ್ಷಕ ಸಿಬ್ಬಂದಿಯನ್ನು ಪ್ರವಾಸಿ ಮಿತ್ರ ಎಂದು ನೇಮಿಸಲಾಗಿದೆ. ರಾಣೆಬೆನ್ನೂರ ಕ್ಷೇತ್ರದ ಬೆಟ್ಟದ ಮಲ್ಲಪ್ಪ ತಾಣಕ್ಕೆ 2 ಜೀಪುಗಳು ಮಂಜೂರಾಗಿದೆ. ಜಿಲ್ಲೆಯ 10 ಕೆರೆಗಳಲ್ಲಿ ಬೋಟಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ರಾಣೆಬೆನ್ನೂರ ದೊಡ್ಡಕೆರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಈಗಾಗಲೇ ಬೋಟಿಂಗ್ ಆರಂಭಿಸಲಾಗಿದೆ. 7 ಸದಸ್ಯರಿಗೆ ಮೊಬೈಲ್ ಕ್ಯಾಂಟೀನ್ ತರಬೇತಿ ನೀಡಲಾಗಿದ್ದು, ತಲಾ 5 ಲಕ್ಷ ರೂ. ಮಂಜೂರಾಗಿದೆ. ಗೈಡ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.

- ಡಾ.ವಿಜಯಮಹಾಂತೇಶ ದಾನಮ್ಮನವರ, ಡಿಸಿ ಹಾಗೂ ಅಧ್ಯಕ್ಷರು ಪ್ರವಾಸೋದ್ಯಮ ಸಮಿತಿ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net