ಟೋಬಿ ಸಿನಿಮಾ ಪೋಸ್ಟರ್ ಮೇಲೆ ಅನುಮಾನ ?

26 HVR 2
Published on

ಹಾವೇರಿ: ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಟೋಬಿ’ ಸಿನಿಮಾದ ಟಗರಿನ ಪೋಸ್ಟರ್ ಈ ಮೊದಲು ತಾವು ರಚಿಸಿದ್ದ ಪೋಸ್ಟರ್ ರೀತಿಯಲ್ಲೇ ಇದೆ. ನನ್ನ ಚಿತ್ರವನ್ನೇ ಕಾಪಿ ಮಾಡಿದಂತೆ ಕಾಣುತ್ತಿದೆ ಎಂದು ರಟ್ಟಿಹಳ್ಳಿ ಮೂಲದ ಯುವಕ ಪ್ರಶಾಂತ ಪವಾರ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ನಾನು ಟಗರಿನ ಕುರಿತಾದ ಸಿನಿಮಾ ಕಥೆಯೊಂದನ್ನು ಬರೆದಿದ್ದೇನೆ. ಅದನ್ನು ಸಿನಿಮಾ ರೂಪಕ್ಕೆ ತರಬೇಕು ಎಂಬ ಕಾರಣಕ್ಕೆ ಒಂದು ಪೋಸ್ಟರ್ ಕೂಡ ರಚಿಸಿದ್ದೆ. ಅದರಲ್ಲಿ ಒಂದು ಟಗರು, ಅದರ ಮೂಗಿಗೆ ಒಂದು ನತ್ತು ಹಾಕಲಾಗಿತ್ತು. ಅದರ ಹಿಂಬದಿಯಲ್ಲಿ ಮಾರಿ ದೇವತೆಯ ಚಿತ್ರ ಬಿಡಿಸಲಾಗಿತ್ತು. ಟೋಬಿ ಸಿನಿಮಾದ ಪೋಸ್ಟರ್‌ನಲ್ಲಿ ಕೂಡ ಟಗರು ಇದ್ದು ಅದಕ್ಕೆ ನತ್ತು ಹಾಕಲಾಗಿದೆ. ಮಾರಿ ಮಾರಿ ಮಾರಿಗೆ ದಾರಿ ಎಂದು ಬರೆಯಲಾಗಿದೆ. ಟೋಬಿ ಸಿನಿಮಾ ಪೋಸ್ಟರ್ ನನ್ನ ಪೋಸ್ಟರ್ ರೀತಿಯಲ್ಲೇ ಇರುವುದಕ್ಕೆ ಹಲವು ಅನುಮಾನ ಮೂಡಿವೆ ಎಂದರು.
ಈ ಪೋಸ್ಟರ್ ಹಿಡಿದು ಬೆಂಗಳೂರಿನ ಗಾಂಧಿ ನಗರದ ಹಲವಾರು ಸಹಾಯಕ ನಿರ್ದೇಶಕರು, ಮತ್ತಿತರರ ಬಳಿ ಚರ್ಚಿಸಿದೆ. ಆದರೆ, ಅವರಾರೂ ನನಗೆ ಪ್ರೋತ್ಸಾಹ ನೀಡಲಿಲ್ಲ. ಬೆನ್ನು ತಟ್ಟಲಿಲ್ಲ. ಹಾಗಾಗಿ, ನಾನು ಊರಿಗೆ ವಾಪಸಾದೆ. ಉತ್ತರ ಕರ್ನಾಟಕದ ನನ್ನಂತಹ ಅನೇಕ ಪ್ರತಿಭಟಗಳಿಗೆ ಅವಕಾಶಗಳು ದೊರೆಯುತ್ತಿಲ್ಲ. ನನ್ನ ಮೇಲೆ ಯಾರಿಗೂ ಸಂಶಯ ಬರಬಾರದು ಎಂಬುದಕ್ಕೆ ಟೋಬಿ ಪೋಸ್ಟರ್ ಬಿಡುಗಡೆಯಾದ ಐದೇ ನಿಮಿಷದಲ್ಲಿ ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನಾನು ರಚಿಸಿದ ಪೋಸ್ಟರ್ ಶೇರ್ ಮಾಡಿದ್ದೇನೆ. ನಾನು ಕೂಡ ರಾಜ್ ಶೆಟ್ಟಿ ಅಭಿಮಾನಿ. ಅವರ ಸಿನಿಮಾ ಚಿತ್ರಕಥೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಈ ಪೋಸ್ಟರ್‌ನ ಸತ್ಯ ಬಯಲಾಗಬೇಕು ಎಂದಷ್ಟೇ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಭಾಷ ಬೆಂಗಳೂರು, ಸುನೀಲ ನಾಯಕ, ಸಂತೋಷ ಬಾಜಿರಾಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net