ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಮಂಗಳವಾರ ನಗರದ ವಿವಿಧ ಧೂಮಪಾನ ಅಡ್ಡಾ ಹಾಗೂ ಪಾನ್‌ಶಾಪ್‌ಗಳ ಮೇಲೆ ದಾಳಿ ನಡೆಸಿ, 1,550 ರೂ. ದಂಡ ವಸೂಲಿ ಮಾಡಲಾಗಿದೆ.
ಪರವಾನಿಗೆ ಪಡೆಯದೇ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಹಾಗೂ ಕಾಯ್ದೆಯ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಂಬಾಕು ನಿಯಂತ್ರಣ ಕಾಯ್ದೆ-2003ರ ಕಲಂ-6 ಕಲಂ-4ರ ಅಡಿಯಲ್ಲಿ 17 ಪ್ರಕರಣ ದಾಖಲಿಸಿ 1,550 ರೂ. ದಂಡ ವಸೂಲಿ ಮಾಡಲಾಗಿದೆ. ಪರೋಕ್ಷವಾಗಿ ತಂಬಾಕು ಜಾಹೀರಾತು ಮಾಡುವ ಆರು ಫಲಕಗಳನ್ನು ತೆರವುಗೊಳಿಸಲಾಗಿದೆ.
ಈ ತನಿಖಾ ದಾಳಿ ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ.ಸಂತೋಷ ದಡ್ಡಿ, ಸಾಮಾಜಿಕ ಕಾರ್ಯಕರ್ತ ದಾದಾಪೀರ ಹುಲಿಕಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತಗೌಡ ಪಾಟೀಲ, ಇತರರು ಇದ್ದರು.