ತಿರಂಗಾ ರ‌್ಯಾಲಿಯಲ್ಲಿ ಸಂಘ- ಸಂಸ್ಥೆಗಳು, ದೇಶಭಕ್ತರು ಭಾಗವಹಿಸಲಿ; ವೆಂಕಟೇಶ ನಾರಾಯಣಿ, ಪರಮೇಶ್ವರಪ್ಪ ಮೇಗಳಮನಿ ಮನವಿ

Venkatesha Narayani
Published on

ಹಾವೇರಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ ಭಾರತೀಯ ಸೈನಿಕರೊಂದಿಗೆ ನಾವಿದ್ದೇವೆ ಎಂಬುದನ್ನು ಸಾರಲು ನಗರದಲ್ಲಿ ಮೇ.23ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಬೃಹತ್ ತಿರಂಗಾ ರ‌್ಯಾಲಿಗೆ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಬೆಂಬಲಿಸಬೇಕು. ರ‌್ಯಾಲಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾರಾಯಣಿ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಪಹಲ್ಗಾಮ್‌ನಲ್ಲಿ ದೇಶದ 26 ಪ್ರಜೆಗಳನ್ನು ಪಾಕಿಸ್ತಾನ ಉಗ್ರರು ಹತ್ಯೆಗೈದು ಹೀನಕೃತ್ಯ ನಡೆಸಿದ್ದರು. ಈ ಘಟನೆಯನ್ನು ಭಾರತ ದೇಶ ತೀವ್ರವಾಗಿ ಖಂಡಿಸಿತ್ತು. ಮೂರು ಸೇನೆಯ ಮುಖ್ಯಸ್ಥರು ಒಟ್ಟಿಗೆ ನಡೆಸಿದ ಅಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಭತ್ತು ಉಗ್ರರ ಅಡಗುತಾಣಗಳನ್ನು ಮಟ್ಟ ಹಾಕುವಲ್ಲಿ ಹಾಗೂ 11 ವಾಯು ನೆಲೆಗಳನ್ನು ಧ್ವಂಸ ಮಾಡುವಲ್ಲಿ ಯಶಸ್ವಿಯಾದರು ಎಂದರು.

ಬೆಳಗ್ಗೆ 10.30ಕ್ಕೆ ಪುರಸಿದ್ದೇಶ್ವರ ದೇವಸ್ಥಾನದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಯಾತ್ರೆ ನಡೆಯಲಿದೆ. ನಗರದ ನಾಗರಿಕರು, ದೇಶಭಕ್ತರು, ಇಲಾಖಾವಾರು ಅಧಿಕಾರಿ, ಸಿಬ್ಬಂದಿ, ವೈದ್ಯ ಸಂಘಟನೆ, ದಲಿತ ಸಂಘಟನೆ, ಆಟೋ ಚಾಲಕರು, ವಕೀಲರ ಸಂಘಟನೆ, ಕಾರ್ಮಿಕ ಸಂಘಟನೆ ಹೀಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾತಿ, ಮತ, ಭೇದ-ಭಾವ ಬದಿಗೊತ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿ, ಭಾರತದಲ್ಲಿ ಕುಂಕುಮ ಮತ್ತು ಬಳೆಗಳಿಗೆ ತನ್ನದೇಯಾದ ಪ್ರಾಮುಖ್ಯತೆ ಇದೆ. ಆಪರೇಶನ್ ಸಿಂಧೂರ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆ ದೇಶವೇ ಮೆಚ್ಚುವ ಕಾರ್ಯವಾಗಿದೆ. ತಿರಂಗಾ ಯಾತ್ರೆಯಲ್ಲಿ ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಸಿ ಕೋರಿ, ಶಿವಯೋಗಿ ಹುಲಿಕಂತಿಮಠ, ಹೊನ್ನಪ್ಪ ಯಲಿಗಾರ, ವಿರೂಪಾಕ್ಷಪ್ಪ ಬೆನ್ನೂರ, ಹನುಮಂತ ದಾಸರ, ಸುಭಾಷ, ಪ್ರಕಾಶ, ಆಂಜನೇಯ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net